ಪುನರ್ವಸತಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯ ಕೊರತೆ: ತುರ್ತಾಗಿ ಬಗೆಹರಿಸುವಂತೆ ಶಾಸಕ ಮೇಟಿಗೆ ಗ್ರಾಮಸ್ಥರ ಮನವಿ
ಬಾಗಲಕೋಟೆ, 16 ಜುಲೈ (ಹಿ.ಸ.): ಆ್ಯಂಕರ್ : ಬಾಗಲಕೋಟೆ ತಾಲೂಕಿನ ಶಿಗಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಗಿಕೇರಿ ಪುನರ್ವಸತಿ ಕೇಂದ್ರ ಸೇರಿದಂತೆ ಚಿಕ್ಕಶಿರಗುಪ್ಪಿ, ಕದಾಂಪೂರ ಆರ್.ಸಿ., ಅಂಡಮುರನಾಳ, ಶಿರಗುಪ್ಪಿ ತಾಂಡಾ ಹಾಗೂ ಸಂಗೊಂದಿ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ತೀವ್ರವಾಗಿದ್ದು, ಈ
ಮನವಿ


ಬಾಗಲಕೋಟೆ, 16 ಜುಲೈ (ಹಿ.ಸ.):

ಆ್ಯಂಕರ್ : ಬಾಗಲಕೋಟೆ ತಾಲೂಕಿನ ಶಿಗಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಗಿಕೇರಿ ಪುನರ್ವಸತಿ ಕೇಂದ್ರ ಸೇರಿದಂತೆ ಚಿಕ್ಕಶಿರಗುಪ್ಪಿ, ಕದಾಂಪೂರ ಆರ್.ಸಿ., ಅಂಡಮುರನಾಳ, ಶಿರಗುಪ್ಪಿ ತಾಂಡಾ ಹಾಗೂ ಸಂಗೊಂದಿ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ತೀವ್ರವಾಗಿದ್ದು, ಈ ಭಾಗದ ಜನರು ಹಲವು ವರ್ಷಗಳಿಂದ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಕರಾಟೆ ಚೀಫ್ ಕೋಚ್ ಎಸ್.ಆರ್. ರಾಠೋಡ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಶಾಸಕ ಉಮೇಶ್ ಮೇಟಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ, ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಬೀದಿ ದೀಪಗಳ ಅಳವಡಿಕೆ, ಒಳಚರಂಡಿ ವ್ಯವಸ್ಥೆ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಶೀಘ್ರದಲ್ಲಿ ಕಲ್ಪಿಸಬೇಕೆಂದು ಆಗ್ರಹಿಸಿದರು.

ಗ್ರಾಮಗಳಲ್ಲಿ ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಜನರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಮಹಿಳೆಯರು ಮತ್ತು ಮಕ್ಕಳು ದೂರದ ಪ್ರದೇಶಗಳಿಂದ ನೀರು ತರುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆಗಳಲ್ಲೇ ನಿಂತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಕರಾಟೆ ಚೀಫ್ ಕೋಚ್ ಎಸ್.ಆರ್. ರಾಠೋಡ ಮಾತನಾಡಿ, ಪುನರ್ವಸತಿ ಕೇಂದ್ರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ಹರಿಸಬೇಕು. ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಶಾಸಕ ಉಮೇಶ್ ಮೇಟಿ ಅವರು, ಗ್ರಾಮಸ್ಥರು ಪ್ರಸ್ತಾಪಿಸಿದ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಆದ್ಯತೆ ಮೇರೆಗೆ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಗಳ ಮುಖಂಡರು, ಹಿರಿಯರು, ಯುವಕರು ಹಾಗೂ ಮಹಿಳೆಯರು ಉಪಸ್ಥಿತರಿದ್ದು, ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande