
ಕೋಲಾರ, ೧೬ ಜುಲೈ (ಹಿ.ಸ):
ಆ್ಯಂಕರ್ : ದಿನೇ ದಿನೇ ಹೆಚ್ಚುತ್ತಿರುವ ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕೊಲೆ ಮತ್ತು ಮಹಿಳಾ ವಿರೋಧಿ ಅಪರಾಧಗಳನ್ನು ತಡೆಗಟ್ಟಲು ಸರ್ಕಾರ ತಕ್ಷಣವೇ ಕಠಿಣ ಹಾಗೂ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದರು.
ಕೋಲಾರದ ಮೆಕ್ಕೆ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಕೋಲಾರ ತಾಲ್ಲೂಕು ತಹಶೀಲ್ದಾರ್ ರವರ ಮೂಲಕ ಸಲ್ಲಿಸಿದರು. ಇಂದಿನ ಸಮಾಜದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದರೂ, ಕೌಟುಂಬಿಕ ಹಿಂಸೆ, ಲೈಂಗಿಕ ಕಿರುಕುಳ, ಆಸಿಡ್ ದಾಳಿ ಮತ್ತು ಸೈಬರ್ ಕಿರುಕುಳದಂತಹ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದೆ. ದೇಶದಲ್ಲಿ ಪ್ರತಿವರ್ಷ ನಾಲ್ಕು ಲಕ್ಷಕ್ಕೂ ಅಧಿಕ ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿದ್ದು, ಕೋಲಾರ ಜಿಲ್ಲೆಯಲ್ಲೂ ಈ ಸಂಖ್ಯೆ ಐನೂರಕ್ಕೂ ಹೆಚ್ಚಿದೆ ಎಂದು ಅಂಕಿಅಂಶಗಳ ಸಹಿತ ತಿಳಿಸಿದ್ದಾರೆ. ಮಹಿಳೆಯರ ಸುರಕ್ಷತೆಯು ಸಂವಿಧಾನದತ್ತವಾದ ಮೂಲಭೂತ ಹಕ್ಕಾಗಿದ್ದು, ಇದನ್ನು ಖಾತರಿಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಒಕ್ಕೂಟವು ತಿಳಿಸಿದೆ.
ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆ, ವಿಶೇಷ ನ್ಯಾಯಾಲಯಗಳ ಸ್ಥಾಪನೆ, ಎಲ್ಲಾ ಕಡೆಗಳಲ್ಲಿ ೨೪*೭ ಸಹಾಯವಾಣಿ ಕೇಂದ್ರಗಳ ಬಲವರ್ಧನೆ ಮತ್ತು ಮಹಿಳೆಯರಿಗೆ ಉಚಿತ ಸ್ವಯಂ ರಕ್ಷಣೆ ತರಬೇತಿ ನೀಡುವ ಮೂಲಕ ಸುರಕ್ಷಿತ ವಾತಾವರಣ ನಿರ್ಮಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ದಲಿತ ಮುಖಂಡ ಟಿ ವಿಜಯ್ ಕುಮಾರ್, ಗಮನ ಶಾಂತಮ್ಮ, ಜನಪದ ಗಾಯಕ ಈ ನೆಲ ಈ ಜಲ ವೆಂಕಟಚಲಪತಿ, ರೈತ ಸಂಘದ ಮುಖಂಡ ಅಬ್ಬಣಿ ಶಿವಪ್ಪ, ಯುವ ರೈತ ಮುಖಂಡ ಆನಂದ್ ಕುಮಾರ್, ಗಮನ ಲಕ್ಷ್ಮಿ, ದಂಡಿಗನಹಳ್ಳಿ ನಾಗರಾಜ್, ವಿಮೋಚನ ಸಂಸ್ಥೆಯ ವಿನೋದ, ಗ್ರಾಮೀಣ ಮಹಿಳಾ ಒಕ್ಕೂಟದ ಪಾಪಮ್ಮ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್