
ನವದೆಹಲಿ, 16 ಜುಲೈ (ಹಿ.ಸ.):
ಆ್ಯಂಕರ್:
ಒಡಿಶಾದ ಪುರಿಯಲ್ಲಿ ಆರಂಭವಾಗಿರುವ ಶ್ರೀ ಜಗನ್ನಾಥರ ಪವಿತ್ರ ರಥಯಾತ್ರೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಭಗವಾನ್ ಜಗನ್ನಾಥರನ್ನು ಸ್ಮರಿಸಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಜಗನ್ನಾಥರ ದಿವ್ಯ ಕೃಪೆಯಿಂದ ದೇಶದ ಪ್ರತಿಯೊಬ್ಬರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹ ತುಂಬಲಿ ಎಂದು ಪ್ರಾರ್ಥಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂಸ್ಕೃತದ ಸುಭಾಷಿತದ ಧ್ವನಿ–ದೃಶ್ಯ ಸಂದೇಶವನ್ನು ಹಂಚಿಕೊಂಡಿದ್ದಾರೆ.
ದೇವದೇವ ಜಗನ್ನಾಥ ಸುರಾಸುರ ನಮಸ್ಕೃತ। ಪುಣ್ಯಶ್ಲೋಕಾವ್ಯಯಾನಂತ ಪರಮಾತ್ಮನ್ನಮೋಸ್ತು ತೇ॥ ಎಂಬ ಶ್ಲೋಕವನ್ನು ಹಂಚಿಕೊಂಡಿರುವ ಅವರು, ಮಹಾಪ್ರಭು ಜಗನ್ನಾಥರ ಪವಿತ್ರ ರಥಯಾತ್ರೆಯ ಸಂದರ್ಭದಲ್ಲಿ ಅವರ ಆಶೀರ್ವಾದ ನಮ್ಮೆಲ್ಲರ ಮೇಲೂ ಸದಾ ಇರಲಿ. ಅವರ ದಿವ್ಯ ಕೃಪೆಯಿಂದ ದೇಶದ ಪ್ರತಿಯೊಬ್ಬರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹ ತುಂಬಲಿ ಎಂದು ಬರೆದಿದ್ದಾರೆ.
ಪ್ರಧಾನಿ ಹಂಚಿಕೊಂಡಿರುವ ಧ್ವನಿ–ದೃಶ್ಯ ಸಂದೇಶದಲ್ಲಿ, ದೇವತೆಗಳಿಗೂ ದೇವರಾದ, ಸಮಸ್ತ ಜಗತ್ತಿನ ಅಧಿಪತಿಯಾದ ಭಗವಾನ್ ಜಗನ್ನಾಥರನ್ನು ದೇವತೆಗಳಿಂದ ಹಿಡಿದು ಸಮಸ್ತ ಜೀವಿಗಳು ಆರಾಧಿಸುತ್ತಾರೆ. ಅವರ ಕೀರ್ತಿ ಪವಿತ್ರ ಹಾಗೂ ಕಲ್ಯಾಣಕರವಾಗಿದೆ. ಅವರು ಅವಿನಾಶಿ, ಅನಂತ ಹಾಗೂ ಎಲ್ಲಾ ಜೀವಿಗಳ ಹೃದಯದಲ್ಲಿ ನೆಲೆಸಿರುವ ಪರಮಾತ್ಮರು. ಅಂತಹ ಭಗವಾನ್ ಜಗನ್ನಾಥರಿಗೆ ಪುನಃ ಪುನಃ ನಮಸ್ಕಾರಗಳು ಎಂದು ವಿವರಿಸಲಾಗಿದೆ.
ಒಡಿಶಾದ ಪುರಿಯಲ್ಲಿ ಇಂದು ಆರಂಭವಾದ ಜಗನ್ನಾಥರ ರಥಯಾತ್ರೆಯನ್ನು ವೀಕ್ಷಿಸಲು ದೇಶ–ವಿದೇಶಗಳಿಂದ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರು ಆಗಮಿಸಿದ್ದು, ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.