
ನವದೆಹಲಿ, 16 ಜುಲೈ (ಹಿ.ಸ.):
ಆ್ಯಂಕರ್:
ಜುಲೈ 20ರಿಂದ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದ ಸಿದ್ಧತೆ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ನೇತೃತ್ವದಲ್ಲಿ ಹೊಸ ರಾಷ್ಟ್ರೀಯ ತಂಡದ ರಚನೆ ಹಾಗೂ ಕೇಂದ್ರ ಸಚಿವ ಸಂಪುಟದಲ್ಲಿ ಸಂಭವನೀಯ ಪುನರ್‌ರಚನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಬುಧವಾರ ತಡರಾತ್ರಿವರೆಗೆ ಉನ್ನತ ಮಟ್ಟದ ಸಭೆ ನಡೆಯಿತು.
ಮೂಲಗಳ ಪ್ರಕಾರ, ಸುಮಾರು ಮೂರು ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿದ್ದರು. ಸಭೆಯ ಕುರಿತು ಬಿಜೆಪಿ ಇನ್ನೂ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.
ಪಕ್ಷದ ಮೂಲಗಳ ಪ್ರಕಾರ, ಈ ಸಭೆ ಕೇವಲ ಸಂಸತ್ತಿನ ಮಳೆಗಾಲದ ಅಧಿವೇಶನದ ಸಿದ್ಧತೆಗೆ ಮಾತ್ರ ಸೀಮಿತವಾಗಿರದೆ, ಸರ್ಕಾರ ಹಾಗೂ ಬಿಜೆಪಿ ಸಂಘಟನೆಯಲ್ಲಿ ನಡೆಯಬಹುದಾದ ಮಹತ್ವದ ಬದಲಾವಣೆಗಳಿಗೆ ದಿಕ್ಕು ನಿರ್ಧರಿಸುವ ಸಭೆಯಾಗಿತ್ತು. ಕಳೆದ ಕೆಲವು ದಿನಗಳಿಂದ ನಡೆದ ಸರಣಿ ಸಭೆಗಳಲ್ಲಿ ಚರ್ಚಿಸಲಾದ ವಿಷಯಗಳಿಗೆ ಅಂತಿಮ ರೂಪ ನೀಡುವ ಉದ್ದೇಶವೂ ಇದಾಗಿತ್ತು ಎಂದು ಹೇಳಲಾಗಿದೆ.
ಮೂಲಗಳ ಮಾಹಿತಿ ಪ್ರಕಾರ, ಈ ಸಭೆಗೆ ಮುನ್ನ ಐದು ಮಹತ್ವದ ಸಭೆಗಳು ನಡೆದಿದ್ದವು. ಮೊದಲ ಸಭೆ ಪ್ರಧಾನಿ ನಿವಾಸದಲ್ಲಿ ಕೇಂದ್ರ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ನಡೆದಿತ್ತು. ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ಅಮಿತ್ ಶಾ, ನಿತಿನ್ ನವೀನ್, ಬಿ.ಎಲ್. ಸಂತೋಷ್ ಸೇರಿದಂತೆ ಪ್ರಮುಖರು ಭಾಗವಹಿಸಿದ ಸಭೆ ನಡೆಯಿತು. ಮೂರನೇ ಹಂತದಲ್ಲಿ ಪ್ರಧಾನಿ ಹಿರಿಯ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಮಾಲೋಚನೆ ನಡೆಸಿದರು. ನಾಲ್ಕನೇ ಸಭೆ ಅಮಿತ್ ಶಾ ಮತ್ತು ನಿತಿನ್ ನವೀನ್ ನಡುವೆ ನಡೆದಿದ್ದು, ಐದನೇ ಸಭೆ ಜುಲೈ 14ರಂದು ಅಮಿತ್ ಶಾ ನಿವಾಸದಲ್ಲಿ ನಡೆದಿತ್ತು. ಈ ಸಭೆಯಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡ ಭಾಗವಹಿಸಿದ್ದರು. ನಂತರ ನಿತಿನ್ ನವೀನ್ ಮತ್ತು ಬಿ.ಎಲ್. ಸಂತೋಷ್ ಸಹ ಸಭೆಗೆ ಸೇರಿದ್ದರು.
ರಾಜಕೀಯ ವಲಯದ ವಿಶ್ಲೇಷಕರ ಅಭಿಪ್ರಾಯದಂತೆ, ಸರ್ಕಾರ ಮತ್ತು ಪಕ್ಷದ ಸಂಘಟನಾ ಮಟ್ಟದಲ್ಲಿ ಸಮಗ್ರ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಈ ಸಭೆಗಳ ಸರಣಿ ನಡೆದಿದ್ದು, ಬುಧವಾರ ಪ್ರಧಾನಿ ನಿವಾಸದಲ್ಲಿ ನಡೆದ ಸಭೆಯನ್ನು ಅದರ ಅತ್ಯಂತ ಮಹತ್ವದ ಹಾಗೂ ಅಂತಿಮ ಹಂತವೆಂದು ಪರಿಗಣಿಸಲಾಗಿದೆ.
ಸಭೆಯಲ್ಲಿ ಮೊದಲಿಗೆ ಜುಲೈ 20ರಿಂದ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದ ಕಾರ್ಯತಂತ್ರದ ಕುರಿತು ಸುದೀರ್ಘ ಚರ್ಚೆ ನಡೆಯಿತು. ಪ್ರತಿಪಕ್ಷಗಳು ಎತ್ತಬಹುದಾದ ವಿಷಯಗಳು, ಸರ್ಕಾರದ ಶಾಸನಾತ್ಮಕ ಆದ್ಯತೆಗಳು, ಸಂಸತ್ತಿನೊಳಗಿನ ಸಮನ್ವಯ, ವಿವಿಧ ಸಚಿವಾಲಯಗಳ ಸಿದ್ಧತೆಗಳ ಪರಿಶೀಲನೆ ನಡೆಸಲಾಯಿತು. ಪ್ರಮುಖ ಮಸೂದೆಗಳು ಹಾಗೂ ನೀತಿ ನಿರ್ಧಾರಗಳನ್ನು ಪರಿಣಾಮಕಾರಿಯಾಗಿ ಮಂಡಿಸುವ ಜೊತೆಗೆ ಪ್ರತಿಪಕ್ಷಗಳ ಟೀಕೆಗಳಿಗೆ ವಾಸ್ತವಾಂಶ ಹಾಗೂ ರಾಜಕೀಯ ಮಟ್ಟದಲ್ಲಿ ಸಮರ್ಪಕ ಉತ್ತರ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯ ಮತ್ತೊಂದು ಪ್ರಮುಖ ಅಂಶವಾಗಿ ಬಿಜೆಪಿ ಸಂಘಟನಾ ಪುನರ್‌ರಚನೆ ಕುರಿತು ಸಮಾಲೋಚನೆ ನಡೆಯಿತು. ಇತ್ತೀಚೆಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ನಿತಿನ್ ನವೀನ್ ನೇತೃತ್ವದಲ್ಲಿ ಹೊಸ ರಾಷ್ಟ್ರೀಯ ತಂಡದ ರಚನೆ, ವಿವಿಧ ಹಂತಗಳಲ್ಲಿ ಜವಾಬ್ದಾರಿಗಳ ಹಂಚಿಕೆ, ರಾಜ್ಯಗಳ ನಡುವೆ ಸಮನ್ವಯ ಬಲಪಡಿಸುವುದು ಹಾಗೂ ಚುನಾವಣೆ ಎದುರಿಸಲಿರುವ ರಾಜ್ಯಗಳಿಗೆ ವಿಶೇಷ ಕಾರ್ಯತಂತ್ರ ರೂಪಿಸುವ ಕುರಿತು ಚರ್ಚೆ ನಡೆಸಲಾಯಿತು.
ಮೂಲಗಳ ಪ್ರಕಾರ, ಕೇಂದ್ರ ಸಚಿವ ಸಂಪುಟದಲ್ಲಿ ಸಂಭವನೀಯ ಪುನರ್‌ರಚನೆಯ ವಿಷಯವೂ ಸಭೆಯ ಪ್ರಮುಖ ಕಾರ್ಯಸೂಚಿಗಳಲ್ಲೊಂದು ಆಗಿತ್ತು. ಯಾವ ಸಚಿವರ ಖಾತೆಗಳಲ್ಲಿ ಬದಲಾವಣೆ ಸಾಧ್ಯ, ಹೊಸ ಮುಖಗಳಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಸಾಧ್ಯತೆ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಮಿತ್ರಪಕ್ಷಗಳಿಗೆ ಯಾವ ರೀತಿಯ ಪ್ರತಿನಿಧಿತ್ವ ನೀಡಬೇಕು ಎಂಬ ವಿಚಾರಗಳ ಕುರಿತು ಉನ್ನತ ನಾಯಕತ್ವದ ನಡುವೆ ಮಂಥನ ನಡೆದಿದೆ.
ಇದರ ಜೊತೆಗೆ ಮುಂಬರುವ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳ ರಾಜಕೀಯ ಪರಿಸ್ಥಿತಿ, ಪಕ್ಷದ ಸಂಘಟನಾ ಸಿದ್ಧತೆ, ಚುನಾವಣಾ ಪ್ರಚಾರ, ಬೂತ್ ನಿರ್ವಹಣೆ, ಮಿತ್ರಪಕ್ಷಗಳೊಂದಿಗೆ ಸಮನ್ವಯ ಹಾಗೂ ಸ್ಥಳೀಯ ವಿಚಾರಗಳಿಗೆ ಸಂಬಂಧಿಸಿದ ಕಾರ್ಯತಂತ್ರಗಳ ಕುರಿತು ಸಹ ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು.
ರಾಜಕೀಯ ವಿಶ್ಲೇಷಕರ ಪ್ರಕಾರ, ಸತತ ಹಲವು ಸುತ್ತಿನ ಸಮಾಲೋಚನೆಗಳ ಬಳಿಕ ಪ್ರಧಾನಿ ನಿವಾಸದಲ್ಲಿ ನಡೆದ ಈ ಉನ್ನತ ಮಟ್ಟದ ಸಭೆ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಮುಂದಿನ ರಾಜಕೀಯ ಮತ್ತು ಆಡಳಿತಾತ್ಮಕ ಕಾರ್ಯತಂತ್ರದ ಪ್ರಮುಖ ಸೂಚಕವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.