
ಬಾಗಲಕೋಟೆ, 16 ಜುಲೈ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ನಗರದ ಪೆಂಡಾರಿ ಗಲ್ಲಿಯಲ್ಲಿ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಬೋರ್ವೆಲ್ ದುರಸ್ತಿ ಕಾರ್ಯ ಅಪೂರ್ಣಗೊಂಡಿರುವ ಪರಿಣಾಮ, ಬೋರ್ವೆಲ್ ಪೈಪ್ಗಳು ಹಾಗೂ ವಿದ್ಯುತ್ ವೈರ್ಗಳನ್ನು ರಸ್ತೆ ಮೇಲೆಯೇ ಅಸ್ತವ್ಯಸ್ತವಾಗಿ ಬಿಟ್ಟು ಹೋಗಿರುವುದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಮಧ್ಯದಲ್ಲೇ ಬಿದ್ದಿರುವ ಈ ಸಾಮಗ್ರಿಗಳು ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟುಮಾಡುತ್ತಿದ್ದು, ನಗರಸಭೆಯ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಟ್ಟುಹೋಗಿದ್ದ ಕೊಳವೆಬಾವಿಯನ್ನು ದುರಸ್ತಿ ಮಾಡುವ ಉದ್ದೇಶದಿಂದ ಪೈಪ್ ಮತ್ತು ವೈರ್ಗಳನ್ನು ಹೊರತೆಗೆದ ಅಧಿಕಾರಿಗಳು ಅಥವಾ ಗುತ್ತಿಗೆದಾರರು, ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸದೇ ಹಾಗೆಯೇ ಬಿಟ್ಟು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ದಿನನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುವ ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಹಾಗೂ ವಾಹನ ಸವಾರರು ಅಪಾಯದ ನಡುವೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯ ಮೇಲೆ ಬಿದ್ದಿರುವ ಕಬ್ಬಿಣದ ಪೈಪ್ಗಳು ಮತ್ತು ವೈರ್ಗಳಿಂದ ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ರಾತ್ರಿ ವೇಳೆ ಬೆಳಕಿನ ಕೊರತೆಯಿಂದ ಈ ಅಪಾಯ ಮತ್ತಷ್ಟು ಹೆಚ್ಚಾಗುತ್ತಿದೆ. ಅಲ್ಲದೆ, ದುಬಾರಿ ಬೆಲೆಯ ಪೈಪ್ ಮತ್ತು ವಿದ್ಯುತ್ ವೈರ್ಗಳು ಕಳುವಾದರೆ ಅದರ ಹೊಣೆ ಯಾರು ಹೊರುತ್ತಾರೆ ಎಂಬ ಪ್ರಶ್ನೆಯನ್ನೂ ಸಾರ್ವಜನಿಕರು ಎತ್ತಿದ್ದಾರೆ.
ಒಂದು ತಿಂಗಳಿಗೂ ಹೆಚ್ಚು ಕಾಲ ಕಳೆದರೂ ಬೋರ್ವೆಲ್ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿ ಪೈಪ್ಗಳನ್ನು ಮರುಅಳವಡಿಸುವ ಕನಿಷ್ಠ ಜವಾಬ್ದಾರಿಯನ್ನೂ ಸಂಬಂಧಪಟ್ಟ ಅಧಿಕಾರಿಗಳು ತೋರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಾಗರಿಕರ ಸುರಕ್ಷತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಎರಡೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಸ್ಥಳೀಯರು ತಕ್ಷಣವೇ ರಬಕವಿ-ಬನಹಟ್ಟಿ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೋರ್ವೆಲ್ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಬೇಕು. ರಸ್ತೆ ಮೇಲೆ ಬಿದ್ದಿರುವ ಪೈಪ್ ಹಾಗೂ ವೈರ್ಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಜೊತೆಗೆ ಇಂತಹ ನಿರ್ಲಕ್ಷ್ಯ ಮರುಕಳಿಸದಂತೆ ಜವಾಬ್ದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಾಗರಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವುದು ಸ್ಥಳೀಯ ಆಡಳಿತದ ಕರ್ತವ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಸಮಸ್ಯೆಯನ್ನು ಶೀಘ್ರದಲ್ಲಿ ಪರಿಷ್ಕರಿಸುವ ಮೂಲಕ ಸಾರ್ವಜನಿಕರ ವಿಶ್ವಾಸ ಉಳಿಸಿಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande