ಕೃಷ್ಣೆ ತೀರದಲ್ಲೇ ಬರದ ಬವಣೆ: ಕೈಕೊಟ್ಟ ಮಳೆ ವಿಜಯಪುರದಲ್ಲಿ ಅನ್ನದಾತ ಕಂಗಾಲು
ವಿಜಯಪುರ, 16 ಜುಲೈ (ಹಿ.ಸ.) ಆ್ಯಂಕರ್ : ಉತ್ತರ ಕರ್ನಾಟಕದ ಭೀಕರ ಬರಗಾಲಕ್ಕೆ ಹೆಸರುವಾಸಿಯಾಗಿರುವ ವಿಜಯಪುರ ಜಿಲ್ಲೆ ಮತ್ತೊಮ್ಮೆ ತೀವ್ರ ಬರದ ಸಂಕಷ್ಟವನ್ನು ಎದುರಿಸುತ್ತಿದೆ. ರಾಜ್ಯದ ಹಲವೆಡೆ ಮುಂಗಾರು ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವಾಗ, ಕೃಷ್ಣಾ ನದಿಯ ಪಾತ್ರದಲ್ಲಿ ಒಂದೆಡೆ ಪ್ರವಾಹ
ಬರಗಾಲ


ವಿಜಯಪುರ, 16 ಜುಲೈ (ಹಿ.ಸ.)

ಆ್ಯಂಕರ್ : ಉತ್ತರ ಕರ್ನಾಟಕದ ಭೀಕರ ಬರಗಾಲಕ್ಕೆ ಹೆಸರುವಾಸಿಯಾಗಿರುವ ವಿಜಯಪುರ ಜಿಲ್ಲೆ ಮತ್ತೊಮ್ಮೆ ತೀವ್ರ ಬರದ ಸಂಕಷ್ಟವನ್ನು ಎದುರಿಸುತ್ತಿದೆ. ರಾಜ್ಯದ ಹಲವೆಡೆ ಮುಂಗಾರು ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವಾಗ, ಕೃಷ್ಣಾ ನದಿಯ ಪಾತ್ರದಲ್ಲಿ ಒಂದೆಡೆ ಪ್ರವಾಹದ ಭೀತಿ ಕಾಡುತ್ತಿದ್ದರೆ, ಮತ್ತೊಂದೆಡೆ ಅದೇ ಕೃಷ್ಣೆಯ ನೀರನ್ನು ಆಶ್ರಯಿಸಿರುವ ವಿಜಯಪುರ ಜಿಲ್ಲೆಯಲ್ಲಿ ಬರದ ಛಾಯೆ ಮತ್ತಷ್ಟು ಗಾಢವಾಗುತ್ತಿದೆ.

ಆಲಮಟ್ಟಿ ಜಲಾಶಯದ ಹಿಂಭಾಗದಲ್ಲಿ ಒಳಹರಿವು ಹೆಚ್ಚಾಗುತ್ತಿದ್ದರೂ, ಅಣೆಕಟ್ಟಿನ ಮುಂಭಾಗದಲ್ಲಿರುವ ಸಾವಿರಾರು ರೈತರು ಮಾತ್ರ ಆಕಾಶದತ್ತ ಕಣ್ಣಿಟ್ಟು ಮಳೆಯ ನಿರೀಕ್ಷೆಯಲ್ಲಿದ್ದಾರೆ ಎಂದು ರೈತ ಮುಖಂಡ ಅರವಿಂದ ಕುಲಕರ್ಣಿ ಆತಂಕ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವ ಪರಿಣಾಮ ಕೃಷಿ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿವೆ. ಕೃಷಿಯನ್ನೇ ನಂಬಿಕೊಂಡಿರುವ ಸಾವಿರಾರು ರೈತ ಕುಟುಂಬಗಳು ಆತಂಕದಲ್ಲಿದ್ದು, ಲಕ್ಷಾಂತರ ಎಕರೆ ಕೃಷಿ ಭೂಮಿ ಬಿಕೋ ಎನ್ನುತ್ತಿದೆ. ಸಾಮಾನ್ಯವಾಗಿ ಈ ವೇಳೆಗೆ ಜಿಲ್ಲೆಯ ಸುಮಾರು 7.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಪೂರ್ಣಗೊಳ್ಳಬೇಕಿತ್ತು. ಆದರೆ ಈ ಬಾರಿ ಮಳೆ ಕೊರತೆಯಿಂದ ಕೇವಲ ಶೇ.18ರಿಂದ 20ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ. ಉಳಿದ ಮಳೆ ಆಶ್ರಿತ ಪ್ರದೇಶಗಳಲ್ಲಿ ರೈತರು ಬೀಜ ಬಿತ್ತುವ ಧೈರ್ಯವನ್ನೇ ಮಾಡಿಲ್ಲ.

ಈ ಬಾರಿ ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರು ಬ್ಯಾಂಕ್ಗಳು, ಸಹಕಾರಿ ಸಂಘಗಳು ಹಾಗೂ ಖಾಸಗಿ ಮೂಲಗಳಿಂದ ಸಾಲ ಪಡೆದು ತಮ್ಮ ಜಮೀನುಗಳನ್ನು ಹದಗೊಳಿಸಿದ್ದರು. ಆದರೆ ಮಳೆಯ ಕೊರತೆಯಿಂದ ಆ ಎಲ್ಲ ಶ್ರಮ ಮತ್ತು ಹಣ ನೀರಿನಲ್ಲಿ ಹೋದಂತಾಗಿದೆ. ಮಳೆ ಇಲ್ಲದೆ ಬಿತ್ತನೆ ಸಾಧ್ಯವಾಗದ ಕಾರಣ ರೈತರಲ್ಲಿ ಆತಂಕ ಮನೆ ಮಾಡಿದ್ದು, ಬದುಕಿನ ಭವಿಷ್ಯದ ಬಗ್ಗೆ ಅನಿಶ್ಚಿತತೆ ಕಾಡುತ್ತಿದೆ.

ರೈತರು ಸರ್ಕಾರಕ್ಕೆ ಮನವಿ ಮಾಡಿಕೊಂಡು, ನಾವು ಸಾಲ ಮಾಡಿ ಜಮೀನನ್ನು ಹದಗೊಳಿಸಿದ್ದೇವೆ. ಮಳೆ ಇಲ್ಲದೆ ನಮ್ಮ ಬದುಕು ಸಂಪೂರ್ಣ ಹಾಳಾಗುತ್ತಿದೆ. ಸರ್ಕಾರ ಕನಿಷ್ಠ ಬೆಳೆ ಸಾಲದ ಬಡ್ಡಿಯನ್ನಾದರೂ ಮನ್ನಾ ಮಾಡಬೇಕು. ತಕ್ಷಣ ಪರಿಹಾರ ಘೋಷಿಸಿ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

ಸಾಮಾನ್ಯವಾಗಿ ಈ ಸಮಯದಲ್ಲಿ ವಿಜಯಪುರ ಜಿಲ್ಲೆಯ ಹೊಲಗಳಲ್ಲಿ ತೊಗರಿ, ಹೆಸರು, ಉದ್ದು, ಸೂರ್ಯಕಾಂತಿ, ಮೂಕಣಿ ಸೇರಿದಂತೆ ವಿವಿಧ ಮಳೆ ಆಶ್ರಿತ ಬೆಳೆಗಳು ಹಸಿರು ಹೊದಿಕೆ ಹೊದ್ದು ನಿಂತಿರುತ್ತವೆ. ಆದರೆ ಈ ಬಾರಿ ಹೊಲಗಳಲ್ಲಿ ಹಸಿರಿನ ಬದಲು ಬಿರುಕು ಬಿಟ್ಟ ಭೂಮಿ ಮಾತ್ರ ಕಾಣಿಸುತ್ತಿದೆ. ಬಿತ್ತನೆ ಮಾಡದ ಕಾರಣ ರೈತರು ತಮ್ಮ ಜಮೀನಿನತ್ತ ಹೋಗುವುದಕ್ಕೂ ಮನಸ್ಸಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದಕ್ಕೆ ಮತ್ತೊಂದು ದೊಡ್ಡ ಸಮಸ್ಯೆಯಾಗಿ ಜಾನುವಾರುಗಳಿಗೆ ಮೇವು ಕೊರತೆಯೂ ಎದುರಾಗಿದೆ. ಹೊಲಗಳಲ್ಲಿ ಹುಲ್ಲು ಬೆಳೆಯದೇ ಇರುವುದರಿಂದ ಸಾಕುಪ್ರಾಣಿಗಳಿಗೆ ಆಹಾರ ಒದಗಿಸುವುದೇ ಕಷ್ಟವಾಗಿದ್ದು, ಅನೇಕ ರೈತರು ತಮ್ಮ ದನ-ಕರುಗಳನ್ನು ಮಾರಾಟ ಮಾಡುವ ಅನಿವಾರ್ಯ ಪರಿಸ್ಥಿತಿಗೆ ತಲುಪಿದ್ದಾರೆ.

ಕೃಷಿಯ ಜೊತೆಗೆ ಪಶುಸಂಗೋಪನೆಯೂ ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ವ್ಯಕ್ತವಾಗುತ್ತಿದೆ.

ಕೃಷಿ ಇಲಾಖೆ ಮೂಲಗಳ ಪ್ರಕಾರ, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಬಿತ್ತನೆ ಪ್ರಮಾಣ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಇದರಿಂದ ಜಿಲ್ಲೆಯ ಆಹಾರ ಧಾನ್ಯ ಹಾಗೂ ಕಾಳು ಬೆಳೆಗಳ ಉತ್ಪಾದನೆಯ ಮೇಲೂ ಪ್ರತಿಕೂಲ ಪರಿಣಾಮ ಬೀಳಲಿದೆ. ರೈತರ ಆದಾಯ ಕುಸಿತವಾಗುವುದರ ಜೊತೆಗೆ ಕೃಷಿ ಆಧಾರಿತ ಉದ್ಯೋಗಗಳ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ಇನ್ನೊಂದೆಡೆ, ಜಲಾಶಯದ ನೀರನ್ನು ನಂಬಿ ಬಿತ್ತನೆ ಮಾಡಬೇಡಿ ಎಂಬ ಸೂಚನೆಯನ್ನು ಸರ್ಕಾರ ನೀಡಿರುವ ಹಿನ್ನೆಲೆಯಲ್ಲಿ ರೈತರು ಮತ್ತಷ್ಟು ಗೊಂದಲಕ್ಕೆ ಸಿಲುಕಿದ್ದಾರೆ. ಮಳೆಯೂ ಇಲ್ಲ, ನೀರಿನ ಭರವಸೆಯೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿರುವುದರಿಂದ ಅನ್ನದಾತ ಅಕ್ಷರಶಃ ಅತಂತ್ರನಾಗಿದ್ದಾನೆ.

ಜಿಲ್ಲೆಯ ರೈತ ಸಂಘಟನೆಗಳು ಹಾಗೂ ಸಾರ್ವಜನಿಕರು ವಿಜಯಪುರ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೆಳೆ ನಷ್ಟಕ್ಕೆ ಪರಿಹಾರ, ಬೆಳೆ ಸಾಲದ ಬಡ್ಡಿ ಮನ್ನಾ, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚಿನ ಕೆಲಸ ನೀಡುವುದು ಸೇರಿದಂತೆ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande