
ವಿಜಯಪುರ, 16 ಜುಲೈ (ಹಿ.ಸ.):
ಆ್ಯಂಕರ್ : ರೈತರ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಡಂಬಳ ಕ್ರಾಸ್ನಲ್ಲಿ ನಡೆದ ಬೃಹತ್ ರಾಜ್ಯ ಹೆದ್ದಾರಿ ರಸ್ತೆ ತಡೆ ಹೋರಾಟ ಯಶಸ್ವಿಯಾಗಿದ್ದು, ಈ ಹೋರಾಟಕ್ಕೆ ಅಪಾರ ಬೆಂಬಲ ವ್ಯಕ್ತಪಡಿಸಿದ ರೈತರು, ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರಿಗೆ ಸಿಂದಗಿ ಮಾಜಿ ಶಾಸಕ ರಮೇಶ್ ಬೂಸನೂರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ರಾಜ್ಯ ಹೆದ್ದಾರಿ ರಸ್ತೆ ತಡೆ ಹೋರಾಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿ, ತಮ್ಮ ಒಗ್ಗಟ್ಟು ಮತ್ತು ಹೋರಾಟದ ಮನೋಭಾವವನ್ನು ಪ್ರದರ್ಶಿಸಿರುವುದು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಿದೆ ಎಂದು ಹೇಳಿದರು.
ಡಂಬಳ ಕ್ರಾಸ್ನಲ್ಲಿ ನಡೆದ ಈ ಹೋರಾಟದಲ್ಲಿ ರೈತರು ಶಾಂತಿಯುತವಾಗಿ ಪ್ರತಿಭಟಿಸಿ, ಕೃಷಿ ಕ್ಷೇತ್ರದ ಸಮಸ್ಯೆಗಳು, ರೈತರ ಬೇಡಿಕೆಗಳು ಹಾಗೂ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ವಿವಿಧ ಗ್ರಾಮಗಳಿಂದ ರೈತರು, ಮಹಿಳೆಯರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ರೈತರ ಒಗ್ಗಟ್ಟಿನ ಧ್ವನಿಯೇ ನಮ್ಮ ದೊಡ್ಡ ಶಕ್ತಿ. ಅನ್ನದಾತನಿಗೆ ನ್ಯಾಯ ದೊರೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ರೈತರ ಗೌರವ, ಬದುಕು ಮತ್ತು ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಮುಂದೆಯೂ ಇದೇ ರೀತಿಯ ಪ್ರಜಾಸತ್ತಾತ್ಮಕ ಹೋರಾಟಗಳನ್ನು ಸಂಘಟಿಸಲಾಗುವುದು ಎಂದು ರಮೇಶ್ ಬೂಸನೂರು ತಿಳಿಸಿದ್ದಾರೆ.
ಹೋರಾಟ ಯಶಸ್ವಿಯಾಗಲು ಶ್ರಮಿಸಿದ ಎಲ್ಲಾ ರೈತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಮಹಿಳೆಯರು, ಯುವಕರು ಹಾಗೂ ಸಾರ್ವಜನಿಕರಿಗೆ ಅವರು ವಿಶೇಷ ಕೃತಜ್ಞತೆ ಸಲ್ಲಿಸಿದರು. ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರ ತಕ್ಷಣ ಸ್ಪಂದಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ರೈತರ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಜನರ ಬೆಂಬಲ ಮತ್ತಷ್ಟು ಬಲ ತುಂಬಿದ್ದು, ಅನ್ನದಾತನ ನ್ಯಾಯಸಮ್ಮತ ಬೇಡಿಕೆಗಳು ಈಡೇರುವವರೆಗೆ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande