'ಒಂದು ರಾಷ್ಟ್ರ, ಒಂದು ಸಮಯ' ಉಪಕ್ರಮಕ್ಕೆ ಇಸ್ರೋ ಸಹಕಾರ ಅನನ್ಯ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಬೆಂಗಳೂರು, 16 ಜುಲೈ (ಹಿ.ಸ.): ಆ್ಯಂಕರ್:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ''ಒಂದು ರಾಷ್ಟ್ರ, ಒಂದು ಸಮಯ'' ಉಪಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಭೌತಿಕ ಪ್ರಯೋಗಾಲಯ ಹಾಗೂ
ಇಸ್ರೋ ಕೇಂದ್ರಕ್ಕೆ ಸಚಿವ ಜೋಶಿ ಭೇಟಿ


ಬೆಂಗಳೂರು, 16 ಜುಲೈ (ಹಿ.ಸ.):

ಆ್ಯಂಕರ್:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಒಂದು ರಾಷ್ಟ್ರ, ಒಂದು ಸಮಯ' ಉಪಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಭೌತಿಕ ಪ್ರಯೋಗಾಲಯ ಹಾಗೂ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ನಡುವಿನ ಸಹಯೋಗ ಅತ್ಯಂತ ಮಹತ್ವದ್ದಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಗುರುವಾರ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಇಸ್ರೋ ಭಾರತದ ವೈಜ್ಞಾನಿಕ ಸಾಮರ್ಥ್ಯ, ತಾಂತ್ರಿಕ ಶ್ರೇಷ್ಠತೆ ಮತ್ತು ನಾವೀನ್ಯತೆಯ ಪ್ರತೀಕವಾಗಿದೆ. ದೇಶಕ್ಕೆ ನಿಖರ, ಸುರಕ್ಷಿತ, ಸ್ಥಿರ ಹಾಗೂ ಸಂಪೂರ್ಣ ಸ್ವದೇಶಿ ಸಮಯ ಪ್ರಸರಣ ವ್ಯವಸ್ಥೆ ರೂಪಿಸುವ ದಿಕ್ಕಿನಲ್ಲಿ ಸಂಸ್ಥೆ ಮಹತ್ವದ ಹೆಜ್ಜೆ ಇಟ್ಟಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಇಸ್ರೋ ಆತ್ಮನಿರ್ಭರ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನವೀನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. 'ವಿಕಸಿತ ಭಾರತ' ನಿರ್ಮಾಣದ ಗುರಿಗೆ ಇಸ್ರೋ ನೀಡುತ್ತಿರುವ ಕೊಡುಗೆ ಅಪಾರವಾಗಿದೆ ಎಂದು ಜೋಶಿ ಶ್ಲಾಘಿಸಿದರು.

ನಿಖರ ಸಮಯ ಪ್ರೋಟೋಕಾಲ್ ತಂತ್ರಜ್ಞಾನ ಬಳಸಿ ಬೆಂಗಳೂರಿನ ಪ್ರಾದೇಶಿಕ ಉಲ್ಲೇಖ ಮಾನದಂಡ ಪ್ರಯೋಗಾಲಯ ಹಾಗೂ ಚೆನ್ನೈನ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ನಡುವಿನ ಯಶಸ್ವಿ ಪರಿಕಲ್ಪನಾ ಪ್ರದರ್ಶನವು ದೇಶದ ಸಮಯ ಸಮನ್ವಯ ವ್ಯವಸ್ಥೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಈ ಸಾಧನೆಯಿಂದ ಸ್ವದೇಶಿ, ವಿಶ್ವಾಸಾರ್ಹ ಮತ್ತು ಅತ್ಯಂತ ನಿಖರ ರಾಷ್ಟ್ರೀಯ ಸಮಯ ವ್ಯವಸ್ಥೆ ನಿರ್ಮಾಣದ ದಾರಿ ಮತ್ತಷ್ಟು ಸುಗಮವಾಗಿದೆ ಎಂದು ಅವರು ತಿಳಿಸಿದರು.

'ಒಂದು ರಾಷ್ಟ್ರ, ಒಂದು ಸಮಯ' ಉಪಕ್ರಮದ ಮೂಲಕ ದೇಶದ ಬ್ಯಾಂಕಿಂಗ್, ದೂರಸಂಪರ್ಕ, ವಿದ್ಯುತ್, ರಕ್ಷಣಾ, ಸಾರಿಗೆ, ಷೇರು ಮಾರುಕಟ್ಟೆ ಸೇರಿದಂತೆ ಎಲ್ಲ ಪ್ರಮುಖ ಕ್ಷೇತ್ರಗಳಿಗೆ ಒಂದೇ ನಿಖರ ಸಮಯ ವ್ಯವಸ್ಥೆ ಲಭ್ಯವಾಗಲಿದೆ. ಇದರಿಂದ ಡಿಜಿಟಲ್ ಮೂಲಸೌಕರ್ಯ ಇನ್ನಷ್ಟು ಬಲಗೊಳ್ಳಲಿದ್ದು, ರಾಷ್ಟ್ರೀಯ ಭದ್ರತೆ ಹಾಗೂ ತಾಂತ್ರಿಕ ಸ್ವಾವಲಂಬನೆಗೂ ಮಹತ್ತರ ನೆರವಾಗಲಿದೆ ಎಂದು ಹೇಳಿದರು.

ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ, ಸಿ ಎಸ್ಐಆರ್ - ಎನ್ ಪಿ ಎಲ್ ಹಾಗೂ ಇಸ್ರೋ ಸಂಸ್ಥೆಗಳ ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ತಾಂತ್ರಿಕ ತಜ್ಞರನ್ನು ಜೋಶಿ ಅಭಿನಂದಿಸಿದರು.

ಇಸ್ರೋ ಭೇಟಿಯ ವೇಳೆ ಅವರು ಸಂಸ್ಥೆಯ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳೊಂದಿಗೆ ಸಂವಾದ ನಡೆಸಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಪ್ರಗತಿ ದೇಶದ ಸಾಮರ್ಥ್ಯವನ್ನು ವಿಶ್ವದ ಮುಂದೆ ಪ್ರದರ್ಶಿಸಿದ್ದು, ಇಸ್ರೋ ವಿಜ್ಞಾನಿಗಳ ಪರಿಶ್ರಮ ಮತ್ತು ಸಮರ್ಪಣೆ ಯುವಜನತೆಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.

ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳು ಕೇವಲ ದೇಶದ ಅಭಿವೃದ್ಧಿಗಷ್ಟೇ ಸೀಮಿತವಾಗದೆ, ಜಾಗತಿಕ ವೈಜ್ಞಾನಿಕ ಸಮುದಾಯಕ್ಕೂ ಅಮೂಲ್ಯ ಕೊಡುಗೆ ನೀಡುತ್ತಿವೆ. ಮುಂದಿನ ದಿನಗಳಲ್ಲಿ ಇಸ್ರೋ ಇನ್ನಷ್ಟು ಹೊಸ ಮೈಲಿಗಲ್ಲುಗಳನ್ನು ನಿರ್ಮಿಸಲಿದೆ ಎಂಬ ವಿಶ್ವಾಸವನ್ನೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಕ್ತಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande