ಆರ್ಥಿಕತೆಗಷ್ಟೇ ಸೀಮಿತವಲ್ಲ ಬ್ರಿಕ್ಸ್; ಗುಣಮಟ್ಟ ಸಹಕಾರಕ್ಕೆ ಬೆಂಗಳೂರು ಸಾಕ್ಷಿ:ಪ್ರಹ್ಲಾದ ಜೋಶಿ
ಬೆಂಗಳೂರು, 16 ಜುಲೈ (ಹಿ.ಸ.): ಆ್ಯಂಕರ್: ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳ ರಾಷ್ಟ್ರೀಯ ಗುಣಮಟ್ಟ ಸಂಸ್ಥೆಗಳ (ಎನ್‌ಎಸ್‌ಬಿ) ಮುಖ್ಯಸ್ಥರ ಐದನೇ ಶೃಂಗಸಭೆಗೆ ಗುರುವಾರ ಬೆಂಗಳೂರಿನಲ್ಲಿ ಚಾಲನೆ ದೊರೆಯಿತು. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸಭೆಯನ್ನು ಉದ್ಘಾಟಿಸಿ, ಬ್ರಿಕ್ಸ್‌ ಸಹಕಾರವು
ಬ್ರಿಕ್ಸ್ ಸಭೆಯಲ್ಲಿ ಮಾತನಾಡಿದ ಜೋಶಿ


ಬೆಂಗಳೂರು, 16 ಜುಲೈ (ಹಿ.ಸ.):

ಆ್ಯಂಕರ್:

ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳ ರಾಷ್ಟ್ರೀಯ ಗುಣಮಟ್ಟ ಸಂಸ್ಥೆಗಳ (ಎನ್‌ಎಸ್‌ಬಿ) ಮುಖ್ಯಸ್ಥರ ಐದನೇ ಶೃಂಗಸಭೆಗೆ ಗುರುವಾರ ಬೆಂಗಳೂರಿನಲ್ಲಿ ಚಾಲನೆ ದೊರೆಯಿತು. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸಭೆಯನ್ನು ಉದ್ಘಾಟಿಸಿ, ಬ್ರಿಕ್ಸ್‌ ಸಹಕಾರವು ಕೇವಲ ಆರ್ಥಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಪ್ರತಿಪಾದಿಸಿದರು.

ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್‌ ರಾಷ್ಟ್ರಗಳ ನಡುವೆ ಪ್ರಮಾಣೀಕರಣದಲ್ಲಿ ಸಹಕಾರ ವಿಷಯದಡಿ ನಡೆಯುತ್ತಿರುವ ಈ ಎರಡು ದಿನಗಳ ಸಭೆಯಲ್ಲಿ ಭಾರತ ಸೇರಿದಂತೆ ಬ್ರೆಜಿಲ್‌, ಚೀನಾ, ಈಜಿಪ್ಟ್‌, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್‌, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಷ್ಟ್ರೀಯ ಗುಣಮಟ್ಟ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದಾರೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಪ್ರಲ್ಹಾದ ಜೋಶಿ, ಬ್ರಿಕ್ಸ್‌ ವಿಶ್ವದ ಶೇ.49.5ರಷ್ಟು ಜನಸಂಖ್ಯೆ, ಶೇ.40ರಷ್ಟು ಜಾಗತಿಕ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಹಾಗೂ ಶೇ.26ರಷ್ಟು ಜಾಗತಿಕ ವ್ಯಾಪಾರವನ್ನು ಪ್ರತಿನಿಧಿಸುತ್ತಿದೆ ಎಂದು ಹೇಳಿದರು. ಭಯೋತ್ಪಾದನೆ ನಿಗ್ರಹ, ಹವಾಮಾನ ಬದಲಾವಣೆ, ಆಹಾರ ಮತ್ತು ಇಂಧನ ಭದ್ರತೆ, ಹಣಕಾಸು, ವ್ಯಾಪಾರ, ಕೃಷಿ, ಕಾರ್ಮಿಕ, ಡಿಜಿಟಲ್‌ ಮತ್ತು ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬ್ರಿಕ್ಸ್‌ ಸಹಕಾರ ವಿಸ್ತರಿಸಿರುವುದನ್ನು ಅವರು ಉಲ್ಲೇಖಿಸಿದರು.

ಭಾರತದ ರಾಷ್ಟ್ರೀಯ ಗುಣಮಟ್ಟ ಸಂಸ್ಥೆಯಾಗಿರುವ ಭಾರತೀಯ ಮಾನದಂಡಗಳ ಬ್ಯೂರೋ (ಬಿಐಎಸ್‌) ಸುಮಾರು ಎಂಟು ದಶಕಗಳಿಂದ ಗುಣಮಟ್ಟದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದು, ಸದಸ್ಯ ರಾಷ್ಟ್ರಗಳ ನಡುವೆ ಮಾಹಿತಿ ವಿನಿಮಯ, ತಾಂತ್ರಿಕ ಸಹಕಾರ ಹಾಗೂ ಸಾಮರ್ಥ್ಯ ವೃದ್ಧಿಗೆ ಈ ಸಭೆ ಮಹತ್ವದ ವೇದಿಕೆಯಾಗಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಬಿಐಎಸ್‌ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳಲ್ಲಿ ಪ್ರಮಾಣೀಕರಣ ಕುರಿತು ಭಾರತದ ದೃಷ್ಟಿಕೋನವನ್ನು ಮಂಡಿಸಲಿದ್ದು, ಸುರಕ್ಷತೆ, ನೈತಿಕತೆ, ಪಾರದರ್ಶಕತೆ, ಪರಸ್ಪರ ಕಾರ್ಯಸಾಧ್ಯತೆ ಹಾಗೂ ವಿಶ್ವಾಸಾರ್ಹತೆ ಕುರಿತ ಮಾನದಂಡಗಳ ಮೇಲೆ ವಿಶೇಷ ಒತ್ತು ನೀಡಲಿದೆ ಎಂದು ಸಚಿವರು ಹೇಳಿದರು.

ಬ್ರಿಕ್ಸ್‌ ರಾಷ್ಟ್ರಗಳ ನಡುವೆ ಪ್ರಮಾಣೀಕರಣದಲ್ಲಿ ಹೆಚ್ಚಿನ ಸಹಕಾರವು ವ್ಯಾಪಾರ ಮತ್ತು ವಾಣಿಜ್ಯವನ್ನು ಮತ್ತಷ್ಟು ಸುಗಮಗೊಳಿಸುವುದರೊಂದಿಗೆ ಜಾಗತಿಕ ಸ್ಪರ್ಧಾತ್ಮಕತೆಯನ್ನು ಬಲಪಡಿಸಲು ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ, ಭಾರತವು ಈ ಹಿಂದೆ 2012, 2016 ಮತ್ತು 2021ರಲ್ಲಿ ಬ್ರಿಕ್ಸ್‌ ಶೃಂಗಸಭೆಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು, 2026ರ ಅಂತ್ಯದಲ್ಲಿ ನವದೆಹಲಿಯಲ್ಲಿ 18ನೇ ಬ್ರಿಕ್ಸ್‌ ಶೃಂಗಸಭೆ ನಡೆಯಲಿದೆ ಎಂದು ಪ್ರಲ್ಹಾದ ಜೋಶಿ ಘೋಷಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande