ಜನಸ್ನೇಹಿ, ಗುಣಮಟ್ಟದ ತನಿಖೆ,ಸಿಬ್ಬಂದಿ ಕಲ್ಯಾಣಕ್ಕೆ ಆದ್ಯತೆ : ಐಜಿಪಿ ಸಂದೀಪ್ ಪಾಟೀಲ್
ಬಾಗಲಕೋಟೆ, 16 ಜುಲೈ (ಹಿ.ಸ.) ಆ್ಯಂಕರ್ : ಉತ್ತರ ವಲಯ ಬೆಳಗಾವಿಯ ಪೊಲೀಸ್ ಮಹಾ ನಿರೀಕ್ಷಕರಾದ ಸಂದೀಪ್ ಪಾಟೀಲ್, ಐಪಿಎಸ್ ಅವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಮಗ್ರ ಪರಿವೀಕ್ಷಣೆ ನಡೆಸಿದರು. ಠಾಣೆಯ ಆಡಳಿತಾತ್ಮಕ ಕಾರ್ಯವೈಖರಿ, ಅಪರಾಧ ಪ್ರಕರಣಗಳ ತನಿಖೆಯ ಪ್ರ
ಪೋಲಿಸ್


ಬಾಗಲಕೋಟೆ, 16 ಜುಲೈ (ಹಿ.ಸ.)

ಆ್ಯಂಕರ್ : ಉತ್ತರ ವಲಯ ಬೆಳಗಾವಿಯ ಪೊಲೀಸ್ ಮಹಾ ನಿರೀಕ್ಷಕರಾದ ಸಂದೀಪ್ ಪಾಟೀಲ್, ಐಪಿಎಸ್ ಅವರು ಬಾಗಲಕೋಟೆ ಜಿಲ್ಲೆಯ

ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಮಗ್ರ ಪರಿವೀಕ್ಷಣೆ ನಡೆಸಿದರು. ಠಾಣೆಯ ಆಡಳಿತಾತ್ಮಕ ಕಾರ್ಯವೈಖರಿ, ಅಪರಾಧ ಪ್ರಕರಣಗಳ ತನಿಖೆಯ ಪ್ರಗತಿ, ಸಾರ್ವಜನಿಕ ಸೇವೆಗಳ ಗುಣಮಟ್ಟ ಹಾಗೂ ಸಿಬ್ಬಂದಿ ಕಲ್ಯಾಣಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಸವಿವರವಾಗಿ ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಿದರು.

ಪರಿಶೀಲನೆ ವೇಳೆ ಠಾಣೆಯಲ್ಲಿನ ವಿವಿಧ ದಾಖಲೆಗಳು, ಪ್ರಕರಣಗಳ ಕಡತಗಳು, ಅಪರಾಧ ನೋಂದಣಿ ಪುಸ್ತಕಗಳು, ರಿಜಿಸ್ಟರ್ಗಳು ಹಾಗೂ ಆಡಳಿತಾತ್ಮಕ ದಾಖಲಾತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರು. ತನಿಖೆಯಲ್ಲಿರುವ ಪ್ರಕರಣಗಳನ್ನು ಕಾನೂನುಬದ್ಧವಾಗಿ, ಗುಣಮಟ್ಟದ ರೀತಿಯಲ್ಲಿ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಪರಾಧ ನಿಯಂತ್ರಣ ಮತ್ತು ಸಾರ್ವಜನಿಕರ ವಿಶ್ವಾಸ ಗಳಿಸುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದ್ದು, ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ಜನಸ್ನೇಹಿ ಮನೋಭಾವದಿಂದ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.

ಸಾರ್ವಜನಿಕರು ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಅವರಿಗೆ ತ್ವರಿತ, ಪಾರದರ್ಶಕ ಹಾಗೂ ಸ್ನೇಹಪರ ಸೇವೆ ದೊರೆಯುವಂತೆ ನೋಡಿಕೊಳ್ಳಬೇಕು. ದೂರುಗಳನ್ನು ಆದ್ಯತೆಯ ಮೇರೆಗೆ ಸ್ವೀಕರಿಸಿ, ಅವುಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದರು. ಠಾಣೆಯ ಸ್ವಚ್ಛತೆ, ಶಿಸ್ತು, ದಾಖಲಾತಿಗಳ ನಿರ್ವಹಣೆ ಹಾಗೂ ಕಚೇರಿ ಕಾರ್ಯವೈಖರಿಯ ಗುಣಮಟ್ಟವನ್ನು ಮತ್ತಷ್ಟು ಉತ್ತಮಗೊಳಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ ಐಜಿಪಿ ಸಂದೀಪ್ ಪಾಟೀಲ್ ಅವರು, ಅವರ ಸೇವಾ ಸಂಬಂಧಿತ ಸಮಸ್ಯೆಗಳು, ಆಡಳಿತಾತ್ಮಕ ಸವಾಲುಗಳು ಹಾಗೂ ಕುಂದುಕೊರತೆಗಳನ್ನು ಆಲಿಸಿದರು. ಸಿಬ್ಬಂದಿಯ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆ ಬದ್ಧವಾಗಿದ್ದು, ಅವುಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಪೊಲೀಸ್ ಸಿಬ್ಬಂದಿಯ ಮನೋಬಲ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಇಲಾಖೆಯು ಅಗತ್ಯ ನೆರವು ನೀಡಲಿದೆ ಎಂದು ತಿಳಿಸಿದರು.

ಬಳಿಕ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿದ ಅವರು, ಸಿಬ್ಬಂದಿಯ ಕುಟುಂಬ ಸದಸ್ಯರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗಳು, ಮೂಲಸೌಕರ್ಯಗಳ ಅಗತ್ಯತೆಗಳು ಹಾಗೂ ಮಕ್ಕಳ ಶಿಕ್ಷಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು. ಪೊಲೀಸ್ ಸಿಬ್ಬಂದಿಯ ಕಲ್ಯಾಣದ ಜೊತೆಗೆ ಅವರ ಕುಟುಂಬಗಳ ಹಿತಾಸಕ್ತಿಯನ್ನೂ ಇಲಾಖೆ ಸಮಾನವಾಗಿ ಪರಿಗಣಿಸುತ್ತದೆ ಎಂದು ಹೇಳಿದರು.

ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಠಾಣೆಯ ಆವರಣದಲ್ಲಿ ಸಸಿ ನೆಟ್ಟು ಪರಿಸರ ಜಾಗೃತಿ ಮೂಡಿಸಿದರು. ಹಸಿರು ಪರಿಸರ ನಿರ್ಮಾಣ ಮತ್ತು ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಪರಿಸರ ಕಾಳಜಿ ಸಮಾಜದ ಎಲ್ಲ ವರ್ಗಗಳಲ್ಲಿ ಮೂಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಮಖಂಡಿ ಪೊಲೀಸ್ ಉಪಾಧೀಕ್ಷಕರಾದ ರೋಷನ್ ಜಮೀರ್, ಜಮಖಂಡಿ ವೃತ್ತ ನಿರೀಕ್ಷಕರಾದ ಮಲ್ಲಪ್ಪ ಮಡ್ಡಿ, ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande