
ಕೋಲಾರ, ೧೬ ಜುಲೈ (ಹಿ.ಸ):
ಆ್ಯಂಕರ್ : ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಅಭಿವೃದ್ಧಿಗೆ ಯಾವುದೇ ಅನುದಾನದ ಕೊರತೆ ಇಲ್ಲ. ಗುದ್ದಲಿ ಪೂಜೆಗಳಿಗೆ ಸಮಯ ವ್ಯರ್ಥ ಮಾಡುವ ಬದಲು ನೇರವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನಕ್ಕೆ ಅನುಕೂಲವಾಗುವಂತೆ ಮಾಡುವುದು ತಮ್ಮ ಆದ್ಯತೆಯಾಗಿದೆ ಮುಂದಿನ ದಿನಗಳಲ್ಲಿ ಪ್ರತಿ ವಾರ ೧೦ ರಿಂದ ೧೫ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಗುರಿ ಹೊಂದಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ತಾಲೂಕಿನ ವಕ್ಕಲೇರಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸುಮಾರು ೪.೩೫ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಶಾಸಕ ಕೊತ್ತೂರು ಜಿ. ಮಂಜುನಾಥ್ ಮತ್ತು ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ನೇತೃತ್ವದಲ್ಲಿ ಚಾಲನೆ ನೀಡಿ ಮಾತನಾಡಿದರು. ನಾವು ಕೇವಲ ಗುದ್ದಲಿ ಪೂಜೆ ಮಾಡಿ ಹೋಗುವವರಲ್ಲ. ಕಾಮಗಾರಿಗಳನ್ನು ಆರಂಭಿಸಿ, ಕೆಲಸಗಳು ನಡೆಯುತ್ತಿರುವಾಗಲೇ ಜನರೊಂದಿಗೆ ಸೇರಿ ಪೂಜೆ ಮಾಡಲು ಬಂದಿದ್ದೇವೆ. ಕೆಲವರು ಗುದ್ದಲಿ ಪೂಜೆ ಮಾಡಿ, ಪಟಾಕಿ ಸಿಡಿಸಿ, ಜೈಕಾರ ಹಾಕಿದ ನಂತರವೂ ಕೆಲಸ ಆರಂಭಿಸಿಲ್ಲ ಎಂದು ಟೀಕೆ ಮಾಡುತ್ತಾರೆ. ಅವರಿಗೆ ಈ ಅಭಿವೃದ್ಧಿ ಕೆಲಸಗಳೇ ತಕ್ಕ ಉತ್ತರವಾಗಿದೆ ಎಂದರು.
ಗ್ರಾಮಸ್ಥರು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ವಿಶೇಷ ಗಮನ ಹರಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜೊತೆ ಗ್ರಾಮಸ್ಥರೇ ಕಾಮಗಾರಿಗಳ ಪರಿಶೀಲನೆ ಮಾಡಬೇಕು. ಯಾವುದೇ ಕಳಪೆ ಕಾಮಗಾರಿಗೆ ಅವಕಾಶ ನೀಡಬಾರದು. ದೂರುಗಳಿಗೆ ಅವಕಾಶವಿಲ್ಲದ ರೀತಿಯಲ್ಲಿ ಗುಣಮಟ್ಟದ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದರು.
ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಮೂಲಸೌಕರ್ಯ ಕಲ್ಪಿಸುವುದು ತಮ್ಮ ಪ್ರಮುಖ ಉದ್ದೇಶವಾಗಿದ್ದು, ಕುಡಿಯುವ ನೀರು, ಚರಂಡಿ, ರಸ್ತೆ ಹಾಗೂ ಇತರೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಗ್ರಾಮದ ಅಭಿವೃದ್ಧಿಗೆ ಏನಾದರೂ ಸಮಸ್ಯೆ ಇದ್ದರೆ ನೇರವಾಗಿ ಅಧಿಕಾರಿಗಳ ಮತ್ತು ನಮ್ಮ ಗಮನಕ್ಕೆ ತನ್ನಿ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ವೈ ಶಿವಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ವಕ್ಕಲೇರಿ ಲೋಕೇಶ್, ಇನಾಯತ್, ನದೀಂ ಬೇಗ್, ವೀರೇಂದ್ರ ಪಾಟೀಲ್, ಚಿನ್ನಾಪುರ ನಾರಾಯಣಸ್ವಾಮಿ, ರವೀಂದ್ರನಾಥ್, ಗಜೇಂದ್ರ, ಗಂಗಾಪುರ ಮಾರ್ಕೊಂಡಪ್ಪ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್