ರೈತರ ಹೋರಾಟಕ್ಕೆ ಜಯ: ಬಳುತಿ ಜ್ಯಾಕ್ವೆಲ್ ಗೆ ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆ
ವಿಜಯಪುರ, 16 ಜುಲೈ (ಹಿ.ಸ.) ಆ್ಯಂಕರ್ : ರೈತರ ನಿರಂತರ ಹೋರಾಟ ಹಾಗೂ ನೀರಿನ ಬೇಡಿಕೆಗೆ ಕೊನೆಗೂ ಸರ್ಕಾರ ಸ್ಪಂದಿಸಿದ್ದು, ಇಂದು ಆಲಮಟ್ಟಿ (ಲಾಲ್ ಬಹದ್ದೂರ್ ಶಾಸ್ತ್ರಿ) ಜಲಾಶಯದಿಂದ ಬಳುತಿ ಜಾಕ್ವೆಲ್ಗೆ ನೀರು ಹರಿಸಲಾಗಿದ್ದು, ರೈತರಲ್ಲಿ ಸಂತಸ ಮನೆಮಾಡಿದೆ. ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ
ಸಂತಸ


ವಿಜಯಪುರ, 16 ಜುಲೈ (ಹಿ.ಸ.)

ಆ್ಯಂಕರ್ : ರೈತರ ನಿರಂತರ ಹೋರಾಟ ಹಾಗೂ ನೀರಿನ ಬೇಡಿಕೆಗೆ ಕೊನೆಗೂ ಸರ್ಕಾರ ಸ್ಪಂದಿಸಿದ್ದು, ಇಂದು ಆಲಮಟ್ಟಿ (ಲಾಲ್ ಬಹದ್ದೂರ್ ಶಾಸ್ತ್ರಿ) ಜಲಾಶಯದಿಂದ ಬಳುತಿ ಜಾಕ್ವೆಲ್ಗೆ ನೀರು ಹರಿಸಲಾಗಿದ್ದು, ರೈತರಲ್ಲಿ ಸಂತಸ ಮನೆಮಾಡಿದೆ. ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸುವಂತೆ ಹಲವು ದಿನಗಳಿಂದ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಫಲ ದೊರೆತಿದ್ದು, ಈ ಬೆಳವಣಿಗೆಯನ್ನು ರೈತರು ತಮ್ಮ ಹೋರಾಟದ ಗೆಲುವೆಂದು ಬಣ್ಣಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ, ಮುಂಗಾರು ಅವಧಿಯಲ್ಲಿ ಜಲಾಶಯ ಇನ್ನೂ ಸಂಪೂರ್ಣ ಭರ್ತಿಯಾಗಿಲ್ಲ ಎಂಬ ಕಾರಣ ನೀಡಿ ನೀರು ಬಿಡುಗಡೆಗೆ ವಿಳಂಬ ಮಾಡುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟರು. ಹಿಂಗಾರು ಅವಧಿಯಲ್ಲಿ ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾದ ಹಲವು ಉದಾಹರಣೆಗಳು ಹಿಂದೆ ನಡೆದಿದ್ದು, ಈ ವರ್ಷವೂ ಜಲಾಶಯ ಭರ್ತಿಯಾಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಪ್ರಸ್ತುತ ಜಲಾಶಯದಲ್ಲಿ ಸುಮಾರು 70 ಟಿಎಂಸಿ ಅಡಿ ಬಳಸಬಹುದಾದ ನೀರು ಲಭ್ಯವಿದ್ದು, ಸಂಪೂರ್ಣ ಭರ್ತಿಯಾಗಲು ಇನ್ನೂ ಸುಮಾರು 35 ಟಿಎಂಸಿ ಅಡಿ ನೀರು ಅಗತ್ಯವಿದೆ. ಮುಂಗಾರು ಮಳೆಗಾಲ ಇನ್ನೂ ಅಂತ್ಯವಾಗದಿರುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಈಗಲೇ ಕಾಲುವೆಗಳಿಗೆ ನೀರು ಹರಿಸಿದರೆ ಮುಂದಿನ ದಿನಗಳಲ್ಲಿ ನೀರಿನ ಕೊರತೆ ಉಂಟಾಗಲಿದೆ ಎಂಬ ಆತಂಕಕ್ಕೆ ಯಾವುದೇ ಆಧಾರವಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ರೈತರ ಬೇಡಿಕೆಯನ್ನು ಪರಿಗಣಿಸಿ ನೀರು ಬಿಡುಗಡೆ ಮಾಡಿರುವುದನ್ನು ಸ್ವಾಗತಿಸಿದ ರೈತರು, ಕೃಷಿ ಹಾಗೂ ಕುಡಿಯುವ ನೀರಿನ ಅಗತ್ಯಗಳಿಗೆ ಸರ್ಕಾರ ಇದೇ ರೀತಿಯ ಸ್ಪಂದನೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು. ನೀರಿನ ಸಮರ್ಪಕ ನಿರ್ವಹಣೆ ಹಾಗೂ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿಯೂ ಕಾಲುವೆಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ಹರಿಸಬೇಕೆಂದು ಮನವಿ ಮಾಡಿದರು.

ಈ ಹೋರಾಟದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ರೈತ ಮುಖಂಡ ಅಖಿಲ್ ಗೌಡ ಪಾಟೀಲ್ ಸೇರಿದಂತೆ ನೂರಾರು ರೈತರು ಭಾಗವಹಿಸಿ ಸರ್ಕಾರದ ಗಮನ ಸೆಳೆದಿದ್ದರು. ಅವರ ನಿರಂತರ ಹೋರಾಟದ ಫಲವಾಗಿ ಬಳುತಿ ಜಾಕ್ವೆಲ್ಗೆ ನೀರು ಹರಿಸಲಾಗಿದ್ದು, ರೈತರು ಪರಸ್ಪರ ಅಭಿನಂದನೆಗಳನ್ನು ಸಲ್ಲಿಸಿ ಹೋರಾಟದ ಯಶಸ್ಸನ್ನು ಸಂಭ್ರಮಿಸಿದರು.

ರೈತರ ಏಕತೆ, ಸಂಘಟಿತ ಹೋರಾಟ ಮತ್ತು ನಿರಂತರ ಒತ್ತಾಯದಿಂದ ಸರ್ಕಾರ ಸ್ಪಂದಿಸಿರುವುದು ಈ ಹೋರಾಟದ ಪ್ರಮುಖ ಯಶಸ್ಸಾಗಿದ್ದು, ಮುಂದಿನ ದಿನಗಳಲ್ಲಿಯೂ ರೈತರ ಸಮಸ್ಯೆಗಳಿಗೆ ಇದೇ ರೀತಿಯ ಶೀಘ್ರ ಪರಿಹಾರ ದೊರೆಯಲಿ ಎಂಬ ಆಶಯವನ್ನು ರೈತ ಸಮುದಾಯ ವ್ಯಕ್ತಪಡಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande