
ವಿಜಯಪುರ, 16 ಜುಲೈ (ಹಿ.ಸ.):
ಆ್ಯಂಕರ್ : ಜನರ ಸುರಕ್ಷತೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಿಜಯಪುರ ನಗರದ ಮಹಿಳಾ ವಸತಿ ಶಾಲೆ ರಸ್ತೆಯನ್ನು ತಮ್ಮ ಸ್ವಂತ ಹಣದಲ್ಲಿ ದುರಸ್ತಿ ಮಾಡಿಸಿದ ಅಂಗವಿಕಲ ಅಣ್ಣಾಸಾಹೇಬ್ ಪಾಟೀಲ್ ಅವರ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಮಹಿಳಾ ವಸತಿ ಶಾಲೆಯ ರಸ್ತೆ ಹಲವು ತಿಂಗಳುಗಳಿಂದ ಹದಗೆಟ್ಟಿದ್ದು, ಮಳೆ ಬಂದಾಗ ರಸ್ತೆ ಸಂಪೂರ್ಣ ಕೆಸರುಮಯವಾಗಿ ಮಾರ್ಪಡುತ್ತಿತ್ತು. ಇದರಿಂದ ಶಾಲಾ ವಿದ್ಯಾರ್ಥಿನಿಯರು, ಸಾರ್ವಜನಿಕರು ಹಾಗೂ ಪಾದಚಾರಿಗಳು ಪ್ರತಿದಿನ ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿದ್ದರು. ದ್ವಿಚಕ್ರ ವಾಹನ ಸವಾರರು ಜಾರಿಬೀಳುವ ಭೀತಿ ಎದುರಿಸುತ್ತಿದ್ದರೆ, ಹಿರಿಯ ನಾಗರಿಕರು ಮತ್ತು ಮಹಿಳೆಯರು ಈ ರಸ್ತೆಯಲ್ಲಿ ಸಂಚರಿಸಲು ಪರದಾಡುತ್ತಿದ್ದರು.
ಈ ರಸ್ತೆ ದುರಸ್ತಿ ಕುರಿತು ಸ್ಥಳೀಯ ನಿವಾಸಿಗಳು ಹಲವು ಬಾರಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಜನಪ್ರತಿನಿಧಿಗಳ ಉದಾಸೀನ ಧೋರಣೆಯಿಂದ ಬೇಸತ್ತ ಅಂಗವಿಕಲ ಅಣ್ಣಾಸಾಹೇಬ್ ಪಾಟೀಲ್ ಅವರು ಸಾರ್ವಜನಿಕರ ಸಂಕಷ್ಟವನ್ನು ಮನಗಂಡು ಸ್ವತಃ ಮುಂದಾಗಿ ತಮ್ಮ ಸ್ವಂತ ವೆಚ್ಚದಲ್ಲಿ ರಸ್ತೆ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
ರಸ್ತೆಯ ಗುಂಡಿಗಳನ್ನು ಮುಚ್ಚಿಸಿ, ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕಾಮಗಾರಿ ನಡೆಸಲಾಗಿದೆ. ರಸ್ತೆ ದುರಸ್ತಿಯಾದ ಬಳಿಕ ಸಾರ್ವಜನಿಕರು ನೆಮ್ಮದಿಯಿಂದ ಸಂಚರಿಸುತ್ತಿದ್ದು, ಸ್ಥಳೀಯರು ಅಣ್ಣಾಸಾಹೇಬ್ ಪಾಟೀಲ್ ಅವರ ಸಾಮಾಜಿಕ ಕಾಳಜಿ ಮತ್ತು ಸೇವಾಭಾವವನ್ನು ಶ್ಲಾಘಿಸಿದ್ದಾರೆ.
ಸರ್ಕಾರ ಮತ್ತು ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಒಬ್ಬ ಅಂಗವಿಕಲ ವ್ಯಕ್ತಿ ತನ್ನ ಸ್ವಂತ ಹಣದಲ್ಲಿ ಮಾಡಿರುವುದು ನಿಜಕ್ಕೂ ಮಾದರಿಯ ಕಾರ್ಯ. ಇದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎಚ್ಚರಿಕೆಯ ಸಂದೇಶವಾಗಬೇಕು, ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಯೋಚಿತವಾಗಿ ಸ್ಪಂದಿಸಬೇಕೆಂಬ ಒತ್ತಾಯವೂ ಈ ಘಟನೆಯ ಮೂಲಕ ಮತ್ತೊಮ್ಮೆ ಕೇಳಿಬಂದಿದೆ. ಜನರ ಸುರಕ್ಷತೆಗಾಗಿ ಸ್ವಾರ್ಥವಿಲ್ಲದೆ ಮುಂದಾದ ಅಣ್ಣಾಸಾಹೇಬ್ ಪಾಟೀಲ್ ಅವರ ಕಾರ್ಯ ವಿಜಯಪುರ ನಗರದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಸಮಾಜಸೇವೆಗೆ ಮಾದರಿಯಾಗಿ ಗುರುತಿಸಿಕೊಂಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande