
ಕೊಪ್ಪಳ, ೧೬ ಜುಲೈ (ಹಿ.ಸ):
ಆ್ಯಂಕರ್:
ಕೊಪ್ಪಳ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ತುರ್ತು ಪರಿಹಾರ ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಜುಲೈ 13ರ ವರದಿಯ ಪ್ರಕಾರ, ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಭಾರಿ ಮಳೆ ಕೊರತೆ ದಾಖಲಾಗಿದ್ದು, ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿರುವ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಗಂಗಾವತಿ ತಾಲೂಕಿನಲ್ಲಿ ಶೇ.75ರಷ್ಟು ಮಳೆ ಕೊರತೆ ದಾಖಲಾಗಿದ್ದು, ಕೊಪ್ಪಳದಲ್ಲಿ ಶೇ.46, ಯಲಬುರ್ಗಾದಲ್ಲಿ ಶೇ.38, ಕುಷ್ಟಗಿಯಲ್ಲಿ ಶೇ.32, ಕುಕನೂರಿನಲ್ಲಿ ಶೇ.27, ಕಾರಟಗಿಯಲ್ಲಿ ಶೇ.25 ಹಾಗೂ ಕನಕಗಿರಿಯಲ್ಲಿ ಶೇ.22ರಷ್ಟು ಮಳೆ ಕೊರತೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಜುಲೈ 7ರಿಂದ 13ರವರೆಗೆ ಕಾರಟಗಿಯಲ್ಲಿ ಶೇ.93 ಹಾಗೂ ಗಂಗಾವತಿಯಲ್ಲಿ ಶೇ.91ರಷ್ಟು ಮಳೆ ಕೊರತೆ ಕಂಡುಬಂದಿದ್ದು, ಜುಲೈ 13ರಂದು ಜಿಲ್ಲೆಯಾದ್ಯಂತ ಶೇ.100ರಷ್ಟು ಮಳೆ ಕೊರತೆ, ಅಂದರೆ ಶೂನ್ಯ ಮಳೆ ದಾಖಲಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ತಕ್ಷಣ ಯುದ್ಧೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಂಡು ರೈತರ ನೆರವಿಗೆ ಬರಬೇಕು. ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಎಂದು ನವೀನ್ ಗುಳಗಣ್ಣವರ ಎಚ್ಚರಿಕೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್