
ವಿಜಯಪುರ, 16 ಜುಲೈ (ಹಿ.ಸ.):
ಆ್ಯಂಕರ್ : ವಿಜಯಪುರ ನಗರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್.ಐ.ಆರ್.) ಪ್ರಕ್ರಿಯೆ ವೇಳೆ ಕೆಲವರು ಕಾನೂನುಬಾಹಿರವಾಗಿ ಬಿ.ಎಲ್.ಒ.ಗಳ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದು, ಅವರ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಾರ್ಡ್ ಸಂಖ್ಯೆ 30ರಲ್ಲಿ ಮಹಾಪೌರ ಎಂ.ಎಸ್. ಕರಡಿ ಅವರ ನೇತೃತ್ವದಲ್ಲಿ ಜನಪ್ರತಿನಿಧಿಗಳ ತಂಡ ಭೇಟಿ ನೀಡಿ, ಚುನಾವಣಾ ಆಯೋಗದ ನಿಯಮಾನುಸಾರ ಯಾವುದೇ ಒತ್ತಡಕ್ಕೂ ಮಣಿಯದೆ ಕಾರ್ಯನಿರ್ವಹಿಸುವಂತೆ ಬಿ.ಎಲ್.ಒ.ಗಳಿಗೆ ಆತ್ಮಸ್ಥೈರ್ಯ ತುಂಬಿತು.
ತಂಡದಲ್ಲಿ ಉಪಮೇಯರ್ ರಾಜು ಜಾಧವ, ನಗರಸಭೆ ಸದಸ್ಯರಾದ ಕಿರಣ ಪಾಟೀಲ ಹಾಗೂ ಜವಾಹಾರ ಗೋಸಾವಿ ಉಪಸ್ಥಿತರಿದ್ದರು. ಅವರು ಎಸ್.ಐ.ಆರ್. ಕಾರ್ಯ ನಡೆಯುತ್ತಿರುವ ಪ್ರದೇಶಗಳಿಗೆ ತೆರಳಿ ಬಿ.ಎಲ್.ಒ.ಗಳೊಂದಿಗೆ ಮಾತುಕತೆ ನಡೆಸಿ, ಮನೆ ಮನೆಗೆ ತೆರಳಿ ಮತದಾರರ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯವನ್ನು ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಸುವಂತೆ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಕೆಲವರು ಬಿ.ಎಲ್.ಒ.ಗಳನ್ನು ಕರ್ತವ್ಯದ ಮಧ್ಯದಲ್ಲೇ ಕರೆಸಿ ಸಭೆಗಳಿಗೆ ಹಾಜರಾಗುವಂತೆ ಒತ್ತಾಯಿಸುತ್ತಿರುವುದರಿಂದ ಸಮಯ ವ್ಯರ್ಥವಾಗುತ್ತಿದ್ದು, ಎಸ್.ಐ.ಆರ್. ಪ್ರಕ್ರಿಯೆಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಆರೋಪಿಸಲಾಯಿತು. ಇಂತಹ ಬೆಳವಣಿಗೆಗಳಿಂದ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀಳಬಹುದೆಂಬ ಆತಂಕವನ್ನೂ ವ್ಯಕ್ತಪಡಿಸಲಾಯಿತು.
ಜನಪ್ರತಿನಿಧಿಗಳು ವಿಜಯಪುರ ನಗರದ ಅಭಿವೃದ್ಧಿ ಹಾಗೂ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಪ್ರತಿಯೊಬ್ಬ ಅರ್ಹ ಮತದಾರರು ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ತಮ್ಮ ಹಾಗೂ ಕುಟುಂಬದ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ಉಳಿದಿದೆಯೇ ಎಂಬುದನ್ನು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಹಾಗೂ ಯಾವುದೇ ಗೊಂದಲ ಅಥವಾ ಒತ್ತಡಗಳಿಗೆ ಅವಕಾಶ ನೀಡದೆ ಪ್ರಜಾಪ್ರಭುತ್ವದ ಪ್ರಕ್ರಿಯೆ ಯಶಸ್ವಿಯಾಗಲು ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande