
ಹಾವೇರಿ, 16 ಜುಲೈ (ಹಿ.ಸ.):
ಆ್ಯಂಕರ್:
ಬಿಡದಿ ಟೌನ್‌ಶಿಪ್ ಗೆ ರೈತರ ವಿರೋಧದ ನಡುವೆಯೂ ಈ ಯೋಜನೆಯನ್ನು ಮುಂದುವರಿಸಲು ಸರ್ಕಾರದ ಆಂತರಿಕ ಕಾರ್ಯಸೂಚಿ ಕಾರಣ, ಮುಖ್ಯಮಂತ್ರಿಗಳಿಗೆ ಈ ಯೋಜನೆ ಮೇಲೆ ಏಕಿಷ್ಟು ಪ್ರೀತಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನೆ ಮಾಡಿದ್ದಾರೆ.
ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಬಿಡದಿ ಟೌನ್‌ಶಿಪ್ ಯೋಜನೆಯನ್ನು ಎಚ್.ಡಿ. ಕುಮಾರಸ್ವಾಮಿ ಅವರು ಪ್ರಾರಂಭಿಸಿದ್ದರು. ನಂತರ ಯಡಿಯೂರಪ್ಪನವರ ಅವಧಿಯಲ್ಲಿ ಈ ಬಗ್ಗೆ ಯಾವುದೇ ಪ್ರಗತಿಯಾಗಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಒಂದು ವೇಳೆ ಕುಮಾರಸ್ವಾಮಿಯವರು ಇದನ್ನು ಪ್ರಾರಂಭಿಸಿದ್ದರೆ, ಪ್ರಸ್ತುತ ಮುಖ್ಯಮಂತ್ರಿಗಳಿಗೆ ಈ ಯೋಜನೆಯ ಮೇಲೆ ಏಕಿಷ್ಟು ಪ್ರೀತಿ? ಎಲ್ಲ ವಿಷಯಗಳಲ್ಲೂ ಕುಮಾರಸ್ವಾಮಿ ಅವರನ್ನು ಟೀಕಿಸುವ ಮುಖ್ಯಮಂತ್ರಿಗಳು, ಈ ಟೌನ್‌ಶಿಪ್ ಯೋಜನೆಯಲ್ಲಿ ಮಾತ್ರ ಅವರನ್ನು ಯಾಕೆ ಅನುಸರಿಸುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ಸರ್ಕಾರವು 4,000 ಎಕರೆ ಜಮೀನಿಗೆ ಅಧಿಸೂಚನೆ ಹೊರಡಿಸಿರುವುದನ್ನು ಪ್ರಸ್ತಾಪಿಸಿದ ಅವರು, ಇದರ ಹಿಂದೆ ಸರ್ಕಾರದ ಹಿತಾಸಕ್ತಿ ಮತ್ತು ಆಂತರಿಕ ಕಾರ್ಯಸೂಚಿ ಅಡಗಿದೆ. ರೈತರು ಬೇಡ ಎನ್ನುತ್ತಿದ್ದರೂ, ಅವರಿಗೆ ಎರಡು ತಿಂಗಳ ಕಾಲಾವಕಾಶ ನೀಡಿ ಒಪ್ಪಿಸಲು ಪ್ರಯತ್ನಿಸುತ್ತಿರುವುದರ ಹಿಂದೆ ಇರುವ ಗುಪ್ತ ಉದ್ದೇಶವೇನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಸುತ್ತಮುತ್ತ ಸ್ಯಾಟಲೈಟ್ ಟೌನ್‌ಶಿಪ್‌ಗಳನ್ನು ಅಭಿವೃದ್ಧಿಪಡಿಸುವ ಚರ್ಚೆ ಕಳೆದ 30 ವರ್ಷಗಳಿಂದ ನಡೆಯುತ್ತಿದೆ. ರೈತರ ಫಲವತ್ತಾದ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಬದಲು, ಸರ್ಕಾರದ ಬಳಿ ಲಭ್ಯವಿರುವ ಜಮೀನಿನಲ್ಲೇ ಟೌನ್‌ಶಿಪ್ ನಿರ್ಮಿಸಲು ಸರ್ಕಾರ ಮುಂದಾಗಬೇಕು ಎಂದು ಬೊಮ್ಮಾಯಿ ಈ ಸಂದರ್ಭದಲ್ಲಿ ಸಲಹೆ ನೀಡಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕದ ರಾಯಚೂರು, ಬೆಳಗಾವಿ ವಿಭಾಗ ಹಾಗೂ ಮಧ್ಯ ಕರ್ನಾಟಕದ ಚಿತ್ರದುರ್ಗ-ತುಮಕೂರು ನಡುವೆ ಬೆಂಗಳೂರಿಗೆ ಹತ್ತಿರವಿರುವ ಕಡೆಗಳಲ್ಲಿ ಎಲ್ಲಿ ಸರ್ಕಾರಿ ಜಮೀನು ಲಭ್ಯವಿದೆಯೋ, ಅಲ್ಲಿಯೇ ಟೌನ್‌ಶಿಪ್‌ಗಳನ್ನು ಮಾಡಲು ತೀರ್ಮಾನಿಸಿದ್ದೆವು. ಇದರಿಂದ ಯಾವುದೇ ವಿವಾದ ಉಂಟಾಗುತ್ತಿರಲಿಲ್ಲ ಮತ್ತು ರೈತರ ಜಮೀನು ಪಡೆಯುವ ಪ್ರಶ್ನೆಯೇ ಬರುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ರೈತರು ಬೇಡವೆಂದಾಗ ಯೋಜನೆ ಕೈಬಿಟ್ಟ ಉದಾಹರಣೆ ಇದೆ
ಕೈಗಾರಿಕಾ ಉದ್ದೇಶಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ರೈತರ ಒಪ್ಪಿಗೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದ ಅವರು, ಹಾವೇರಿ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಮೊಟೇಬೆನ್ನೂರು ಬಳಿ ಜಮೀನು ಗುರುತಿಸಲಾಗಿತ್ತು. ಆದರೆ ಅಲ್ಲಿನ ರೈತರು ಬಂದು, ಇದು ನಮ್ಮ ಫಲವತ್ತಾದ ಜಮೀನು, ನಾವು ಕೊಡುವುದಿಲ್ಲ ಎಂದಾಗ ನಾವು ತಕ್ಷಣ ಆ ಯೋಜನೆಯನ್ನು ಅಲ್ಲಿಂದ ಕೈಬಿಟ್ಟೆವು. ಅಂತಹ ಪ್ರಾಮಾಣಿಕತೆಯನ್ನು ಈಗಿನ ಸರ್ಕಾರವೂ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.
ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲೇ ತಾವು ಮುನ್ನಡೆಯುತ್ತಿರುವುದಾಗಿ ಮುಖ್ಯಮಂತ್ರಿ ಹೇಳಿಕೊಳ್ಳುತ್ತಿರುವುದಕ್ಕೆ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದರು. ಅಣ್ಣಾಜಿ, ಅಪ್ಪಾಜಿ ದಾರಿಯಲ್ಲೇ ಹೋಗುತ್ತಿದ್ದೇವೆ ಎನ್ನುವ ಇವರಿಗೆ ಈ ಯೋಜನೆಯಲ್ಲಿ ಹಿತಾಸಕ್ತಿ ಏನಿದೆ? ಅವರ ಕನಸನ್ನು ನನಸು ಮಾಡಲು ಹೊರಟಿರುವ ಇವರ ಉದ್ದೇಶವೇನು? ಈ ಕನಸಿನ ಹಿಂದೆ ಮತ್ತೊಂದು ಗುಪ್ತ ಕನಸಿದೆಯೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.