
ವಿಜಯಪುರ, 16 ಜುಲೈ (ಹಿ.ಸ.)
ಆ್ಯಂಕರ್ : ಹಾವುಗಳು ಭಯದ ಪ್ರತೀಕವಲ್ಲ, ಪರಿಸರ ಸಮತೋಲನವನ್ನು ಕಾಪಾಡುವ ಪ್ರಕೃತಿಯ ಅಮೂಲ್ಯ ಜೀವಿಗಳು ಎಂಬ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ವಿಜಯಪುರದಲ್ಲಿ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ, ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ವಿಶ್ವ ಹಾವುಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹಾವುಗಳ ಬಗ್ಗೆ ಜನರಲ್ಲಿ ವೈಜ್ಞಾನಿಕ ಅರಿವು ಮೂಡಿಸುವುದು, ಹಾವುಗಳ ಸಂರಕ್ಷಣೆಯ ಮಹತ್ವವನ್ನು ತಿಳಿಸುವುದು ಹಾಗೂ ಸರ್ಪಗಳ ರಕ್ಷಣೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಉರಗ ರಕ್ಷಕರ ಸೇವೆಯನ್ನು ಗೌರವಿಸುವ ವಿಶೇಷ ಕಾರ್ಯಕ್ರಮಗಳು ನಡೆದವು. ಹಾವುಗಳು ಪರಿಸರದ ಆಹಾರ ಸರಪಳಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ.
ವಿಶೇಷವಾಗಿ ರೈತರ ಬೆಳೆಗಳಿಗೆ ಅಪಾಯ ಉಂಟುಮಾಡುವ ಇಲಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಕೃಷಿ ಉತ್ಪಾದನೆ, ಆಹಾರ ಭದ್ರತೆ ಮತ್ತು ಪರಿಸರ ಸಂರಕ್ಷಣೆಗೆ ಅವು ಮಹತ್ತರ ಕೊಡುಗೆ ನೀಡುತ್ತವೆ ಎಂದು ತಜ್ಞರು ವಿವರಿಸಿದರು.
ಅಜ್ಞಾನ, ಭಯ ಮತ್ತು ಮೂಢ ನಂಬಿಕೆಗಳಿಂದ ಹಾವುಗಳನ್ನು ಕಂಡ ತಕ್ಷಣ ಕೊಲ್ಲುವ ಪ್ರವೃತ್ತಿ ಇಂದಿಗೂ ಅನೇಕ ಕಡೆಗಳಲ್ಲಿ ಮುಂದುವರಿದಿದೆ. ಇಂತಹ ಮನೋಭಾವವನ್ನು ಬದಲಾಯಿಸಿ, ಹಾವುಗಳನ್ನು ಸಂರಕ್ಷಿಸುವ ಮನಸ್ಥಿತಿಯನ್ನು ಸಮಾಜದಲ್ಲಿ ಬೆಳೆಸಬೇಕಾದ ಅಗತ್ಯವಿದೆ ಎಂದು ಕಾರ್ಯಕ್ರಮದಲ್ಲಿ ಒತ್ತಿ ಹೇಳಲಾಯಿತು.
ವಿಷಕಾರಿ ಹಾಗೂ ವಿಷರಹಿತ ಹಾವುಗಳನ್ನು ಗುರುತಿಸುವ ವಿಧಾನ, ಹಾವು ಕಡಿತವಾದ ಸಂದರ್ಭದಲ್ಲಿ ಅನುಸರಿಸಬೇಕಾದ ಪ್ರಾಥಮಿಕ ಚಿಕಿತ್ಸೆ, ತಪ್ಪು ಚಿಕಿತ್ಸೆಯಿಂದಾಗುವ ಅಪಾಯಗಳು ಹಾಗೂ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವ ಮಹತ್ವದ ಕುರಿತು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಲಾಯಿತು.
ಸರ್ಪಗಳನ್ನು ಸುರಕ್ಷಿತವಾಗಿ ಹಿಡಿದು ಮಾನವ ವಸತಿ ಪ್ರದೇಶಗಳಿಂದ ಅರಣ್ಯ ಪ್ರದೇಶಗಳಿಗೆ ಬಿಡುವ ಮೂಲಕ ಜೀವ ರಕ್ಷಣೆಯ ಕಾರ್ಯದಲ್ಲಿ ತೊಡಗಿರುವ ಹಲವು ಉರಗ ರಕ್ಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅವರ ಕಾರ್ಯಕ್ಕೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಗುಣಮಟ್ಟದ ಉರಗ ರಕ್ಷಣಾ ಕಿಟ್ಗಳನ್ನು ವಿತರಿಸಲಾಯಿತು. ಅಲ್ಲದೆ, ಅಪಾಯಭರಿತ ಸೇವೆಯಲ್ಲಿ ನಿರತರಾಗಿರುವ ಅವರ ಆರೋಗ್ಯದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಿಎಲ್ ಡಿಈ ಸಂಸ್ಥೆಯ ವತಿಯಿಂದ ಉಚಿತ ಆರೋಗ್ಯ ಹೆಲ್ತ್ ಕಾರ್ಡ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಪ್ರಕೃತಿ ಮತ್ತು ಜೀವವೈವಿಧ್ಯ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಜೀವ ಉಳಿಸುವ ಉರಗ ರಕ್ಷಕರ ಸೇವೆಯನ್ನು ಗೌರವಿಸುವ ಸಮಾಜವೇ ನಿಜವಾದ ನಾಗರಿಕ ಸಮಾಜ. ಹಾವುಗಳ ಬಗ್ಗೆ ಭಯವಲ್ಲ, ಅರಿವು ಬೆಳೆಸಿದಾಗ ಮಾತ್ರ ಮಾನವ ಮತ್ತು ವನ್ಯಜೀವಿಗಳ ಸಹಬಾಳ್ವೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು, ಸಾರ್ವಜನಿಕರು, ಅರಣ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು, ಪರಿಸರ ಪ್ರೇಮಿಗಳು ಹಾಗೂ ಉರಗ ರಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶ್ವ ಹಾವುಗಳ ದಿನದ ಮಹತ್ವವನ್ನು ಸಾರಿದರು. ಹಾವುಗಳ ಸಂರಕ್ಷಣೆ, ಪರಿಸರ ಸಂರಕ್ಷಣೆ ಹಾಗೂ ಜೀವವೈವಿಧ್ಯ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ನಡೆಯಬೇಕು ಎಂದು ಎಲ್ಲರೂ ಆಶಯ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande