
ವಿಜಯಪುರ, 16 ಜುಲೈ (ಹಿ.ಸ.)
ಆ್ಯಂಕರ್ : ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವಿಜಯಪುರ ಜಿಲ್ಲಾ ಕಾರ್ಯಾಲಯದಲ್ಲಿ ನಾಗಠಾಣ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹಾಗೂ ಬಿಎಲ್ಎ -2 ಕಾರ್ಯಕರ್ತರ ವಿಶೇಷ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಕೇಂದ್ರ ಸಚಿವರು ಹಾಗೂ ಸಂಸದರಾದ ರಮೇಶ್ ಜಿಗಜಿಣಗಿ ಅವರೊಂದಿಗೆ ಬಿಜೆಪಿ ಮುಖಂಡ ಮಹೇಂದ್ರ ನಾಯಕ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಮುಂಬರುವ ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯ ನಿಖರತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ವಿಶೇಷ ಪರಿಷ್ಕರಣೆ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸುವ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.
ಪ್ರತಿಯೊಂದು ಬೂತ್ ಮಟ್ಟದಲ್ಲಿ ಮತದಾರರ ಮಾಹಿತಿಯನ್ನು ಸಮರ್ಪಕವಾಗಿ ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳನ್ನು ಸೇರ್ಪಡೆಗೊಳಿಸುವುದು ಹಾಗೂ ಅನರ್ಹ ಹೆಸರುಗಳನ್ನು ನಿಯಮಾನುಸಾರ ಪರಿಷ್ಕರಿಸುವ ಕಾರ್ಯದಲ್ಲಿ ಪಕ್ಷದ ಬಿಎಲ್ಎ -2 ಕಾರ್ಯಕರ್ತರು ಜವಾಬ್ದಾರಿಯಿಂದ ತೊಡಗಿಸಿಕೊಳ್ಳಬೇಕು ಎಂದು ತಿಳಿಸಲಾಯಿತು.
ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಇನ್ನಷ್ಟು ಸದೃಢಗೊಳಿಸುವುದು, ಕಾರ್ಯಕರ್ತರ ನಡುವಿನ ಸಮನ್ವಯವನ್ನು ವೃದ್ಧಿಸುವುದು ಹಾಗೂ ಜನಸಂಪರ್ಕವನ್ನು ವಿಸ್ತರಿಸುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಪ್ರತಿಯೊಬ್ಬ ಕಾರ್ಯಕರ್ತರೂ ಸಂಘಟನೆಯ ಶಕ್ತಿಯಾಗಿದ್ದು, ಪಕ್ಷದ ತತ್ವ-ಸಿದ್ಧಾಂತಗಳನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಕರೆ ನೀಡಲಾಯಿತು.
ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ರಮೇಶ್ ಜಿಗಜಿಣಗಿ ಅವರು ಸಂಘಟನೆಯ ಬಲವೇ ಪಕ್ಷದ ಯಶಸ್ಸಿನ ಮೂಲಾಧಾರವಾಗಿದ್ದು, ಬೂತ್ ಮಟ್ಟದ ಕಾರ್ಯಕರ್ತರ ಶ್ರಮವೇ ಚುನಾವಣಾ ಗೆಲುವಿನ ಪ್ರಮುಖ ಅಂಶವಾಗಿದೆ ಎಂದು ತಿಳಿಸಿದರು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಪಾರದರ್ಶಕ ಹಾಗೂ ನಿಯಮಬದ್ಧವಾಗಿ ನಡೆಸುವ ಮೂಲಕ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸುವಲ್ಲಿ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಮಹೇಂದ್ರ ನಾಯಕ ಮಾತನಾಡಿ, ಕಾರ್ಯಕರ್ತರು ಬದ್ಧತೆ, ಶಿಸ್ತು ಹಾಗೂ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿದರೆ ಪಕ್ಷದ ಸಂಘಟನೆ ಮತ್ತಷ್ಟು ಬಲಿಷ್ಠವಾಗಲಿದೆ. ಜನಸೇವೆ, ಸಂಘಟನೆ ಮತ್ತು ಉತ್ತಮ ಆಡಳಿತದ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಪಕ್ಷದ ವಿವಿಧ ಪದಾಧಿಕಾರಿಗಳು, ಬಿಎಲ್ಎ-2 ಕಾರ್ಯಕರ್ತರು, ಬೂತ್ ಅಧ್ಯಕ್ಷರು ಹಾಗೂ ನಾಗಠಾಣ ವಿಧಾನಸಭಾ ಕ್ಷೇತ್ರದ ಮುಖಂಡರು ಉಪಸ್ಥಿತರಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಅಗತ್ಯ ಸಲಹೆ-ಸೂಚನೆಗಳನ್ನು ಪಡೆದುಕೊಂಡರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande