
ನವದೆಹಲಿ, 16 ಜುಲೈ (ಹಿ.ಸ.):
ಆ್ಯಂಕರ್:
ಬಿಮ್‌ಸ್ಟೆಕ್ (ಬಂಗಾಳ ಕೊಲ್ಲಿ ಬಹುಕ್ಷೇತ್ರೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಉಪಕ್ರಮ) ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಮುಖ್ಯಸ್ಥರ 5ನೇ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪ್ರಾದೇಶಿಕ ಭದ್ರತೆ, ಆರ್ಥಿಕ ಸಹಕಾರ ಮತ್ತು ಸಮನ್ವಯವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.
ಜಾಗತಿಕ ಮಟ್ಟದಲ್ಲಿ ಸಂಘರ್ಷ, ಭೌರಾಜಕೀಯ ಅನಿಶ್ಚಿತತೆ, ತಾಂತ್ರಿಕ ಬದಲಾವಣೆಗಳು ಹಾಗೂ ಸರಬರಾಜು ಸರಪಳಿಯ ಅಡಚಣೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದಸ್ಯ ರಾಷ್ಟ್ರಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದು ಅವರು ಕರೆ ನೀಡಿದರು.
ಬಿಮ್‌ಸ್ಟೆಕ್ ಸುಮಾರು 170 ಕೋಟಿ ಜನಸಂಖ್ಯೆ ಹಾಗೂ 5 ಟ್ರಿಲಿಯನ್ ಅಮೆರಿಕನ್ ಡಾಲರ್‌ಗಳ ಒಟ್ಟು ಆರ್ಥಿಕತೆ ಹೊಂದಿರುವ ಪ್ರಮುಖ ಪ್ರಾದೇಶಿಕ ವೇದಿಕೆಯಾಗಿದೆ ಎಂದು ದೋವಲ್ ತಿಳಿಸಿದರು. ಭಾರತವು ಅನುಸರಿಸುತ್ತಿರುವ ನೆರೆಹೊರೆಯೇ ಮೊದಲ ಆದ್ಯತೆ, ಆ್ಯಕ್ಟ್ ಈಸ್ಟ್ ಮತ್ತು ಮಹಾಸಾಗರ ದೃಷ್ಟಿಕೋನಕ್ಕೆ ಬಿಮ್‌ಸ್ಟೆಕ್ ಪ್ರಮುಖ ವೇದಿಕೆಯಾಗಿದೆ ಎಂದರು.
ಸಭೆಯಲ್ಲಿ ಭಯೋತ್ಪಾದನೆ, ಅಂತಾರಾಷ್ಟ್ರೀಯ ಸಂಘಟಿತ ಅಪರಾಧ, ಸೈಬರ್ ದಾಳಿ, ಸಮುದ್ರ ಭದ್ರತೆ, ಇಂಧನ ಭದ್ರತೆ, ಸಂಪರ್ಕ ವ್ಯವಸ್ಥೆ, ವಿಪತ್ತು ನಿರ್ವಹಣೆ ಹಾಗೂ ಮಾನವೀಯ ನೆರವು ವಿಷಯಗಳಲ್ಲಿ ಸಹಕಾರ ವೃದ್ಧಿಸುವ ಕುರಿತು ಚರ್ಚೆ ನಡೆಯಿತು. ಸಮುದ್ರ ಮಾರ್ಗದ ವಿಪತ್ತು ಪರಿಹಾರ ಕಾರ್ಯಗಳಿಗೆ ಮಾರ್ಗಸೂಚಿ ಹಾಗೂ ಸಮುದ್ರ ಕಾನೂನು ಜಾರಿ ಸಂಸ್ಥೆಗಳ ನಡುವಿನ ಸಹಕಾರಕ್ಕೆ ಮಾರ್ಗದರ್ಶಕ ತತ್ವಗಳಿಗೆ ಸದಸ್ಯ ರಾಷ್ಟ್ರಗಳು ಅನುಮೋದನೆ ನೀಡಿದವು.
ಸಭೆಯಲ್ಲಿ ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ, ಥೈಲೆಂಡ್‌ನ ರಾಷ್ಟ್ರೀಯ ಭದ್ರತಾ ಮುಖ್ಯಸ್ಥರು ಹಾಗೂ ಬಿಮ್‌ಸ್ಟೆಕ್ ಮಹಾಸಚಿವರು ಭಾಗವಹಿಸಿದ್ದರು. ಮುಂದಿನ ವರ್ಷ ಬಿಮ್‌ಸ್ಟೆಕ್ 30ನೇ ವಾರ್ಷಿಕೋತ್ಸವ ಆಚರಿಸಲಿದ್ದು, ಪ್ರಾದೇಶಿಕ ಭದ್ರತೆ ಮತ್ತು ಸಹಕಾರವನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪವನ್ನು ಸದಸ್ಯ ರಾಷ್ಟ್ರಗಳು ಪುನರುಚ್ಚರಿಸಿವೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.