
ಕೋಲಾರ, ೧೬ ಜುಲೈ (ಹಿ.ಸ):
ಆ್ಯಂಕರ್ : ಡೆಂಗ್ಯು ಹರಡಲು ಕಾರಣವಾದ ಸೊಳ್ಳೆಗಳ ನಿಯಂತ್ರಣಕ್ಕೆ ಗ್ರಾಪಂ,ಸ್ಥಳೀಯ ಸಂಸ್ಥೆಗಳ ಜತೆಗೆ ಸಾರ್ವಜನಿಕರು ಸಹಕಾರ ನೀಡಬೇಕು, ಮಕ್ಕಳು ನಿಮ್ಮ ಪೋಷಕರಿಗೆ ಈ ಕುರಿತು ಅರಿವು ಮೂಡಿಸಬೇಕು ಎಂದು ಹಿರಿಯ ಆರೋಗ್ಯ ನಿರೀಕ್ಷಕ ಸತ್ಯನಾರಾಯಣಗೌಡ ಕರೆ ನೀಡಿದರು.
ಡೆಂಗ್ಯೂ ವಿರೋಧಿ ಮಾಸಾಚರಣೆ ಅಂಗವಾಗಿ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸಿ ಡೆಂಗ್ಯು ಕುರಿತು ಜಾಗೃತಿ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಪ್ರತಿಯೊಬ್ಬರು ಸಹ ತಮ್ಮ ಜವಾಬ್ದಾರಿಯನ್ನು ಅರಿತು ರೋಗದಿಂದ ದೂರವಿರಿ. ಮನೆಯಲ್ಲಿ ಇರುವ ನೀರಿನ ತೊಟ್ಟಿಗಳು, ಡ್ರಂಗಳು ಮತ್ತು ಸಿಂಟೆಕ್ಸ್ಗಳನ್ನು ಕನಿಷ್ಠ ವಾರಕ್ಕೆ ಒಂದು ಬಾರಿ ಸ್ವಚ್ಛಗೊಳಿಸಬೇಕು. ಮನೆಯ ಸುತ್ತಮುತ್ತ ಎಸೆದಿರುವ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರ ವಹಿಸಬೇಕು.
ಡೆಂಗ್ಯೂಗೆ ಕಾರಣವಾದ ಈಡಿಸ್ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು, ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಸೊಳ್ಳೆ ಪರದೆಯನ್ನು ಬಳಸಬೇಕು. ನಗರ ಮತ್ತು ಗ್ರಾಮೀಣ ಪ್ರದೇಶದ ಕಲ್ಯಾಣಿ,ನೀರಿನ ತಾಣಗಳಲ್ಲಿ ಸೊಳ್ಳೆಗಳ ಸಂತತಿ ನಿಯಂತ್ರಣಕ್ಕೆ ಕ್ರಮವಹಿಸಿ, ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು, ನೀವು ಡೆಂಗ್ಯು ರೋಗ ಲಕ್ಷಣಗಳ ಕುರಿತು ಮಾಹಿತಿ ಪಡೆದು ಮುನ್ನಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಹಿರಿಯ ಆರೋಗ್ಯ ನಿರೀಕ್ಷಕ ಮುದ್ದೇಗೌಡ ಮಾತನಾಡಿ, ನಗರಸಭೆ, ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳಿಂದ ಪ್ರತಿ ಗ್ರಾಮ,ವಾರ್ಡಿನಲ್ಲಿ ವಾರಕ್ಕೊಮ್ಮೆ ಡೆಂಗ್ಯೂ ಡೇ ಆಚರಿಸುವ ಮೂಲಕ ಸಮುದಾಯದ ಸಹಭಾಗಿತ್ವದೊಂದಿಗೆ ಡೆಂಗ್ಯು ನಿಯಂತ್ರಿಸಲು ಆರೋಗ್ಯ ಇಲಾಖೆಯೊಂದಿಗೆ ಪಂಚಾಯತ್ ರಾಜ್ ಇಲಾಖೆ, ನಗರಸಭೆ ಸಹಕರಿಸುತ್ತಿದ್ದು, ನಾಗರೀಕರು ಸಹಕಾರ ನೀಡಬೇಕು.ಮನುಷ್ಯರಿಗೆ ಆರೋಗ್ಯ ಎಂಬುದು ಮುಖ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೋಗಗಳು ಪತ್ತೆಯಾಗುತ್ತಿದೆ. ಇದರಲ್ಲಿ ಡೆಂಗ್ಯೂ ಜ್ವರವು ಸಹ ಒಂದಾಗಿದ್ದು, ಇದರ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
ಕಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ಮಾತನಾಡಿ, ಈಡೀಸ್ ಈಜಿಪ್ಟಿ ಎಂಬ ಸೊಳ್ಳೆ ಕಡಿತದಿಂದ ಹರಡುತ್ತದೆ. ಸೊಳ್ಳೆಗಳು ಯಾವ ರೀತಿ ಉತ್ಪತ್ತಿಗೆ ಕಾರಣಗಳೇನು ಎಂಬುದನ್ನು ಶಾಲಾ ಮಕ್ಕಳಿಗೆ ತಿಳಿಸಿ ಅವರಲ್ಲಿ ರೋಗ ತಡೆಗಟ್ಟಲು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕಿ ತಾಹೇರಾನುಸ್ರತ್ ಮಾತನಾಡಿ, ಶಾಲೆ,ಮನೆ ಆವರಣದಲ್ಲಿ ಸ್ವಚ್ಚತೆ ಕಾಪಾಡಿ, ಸೊಳ್ಳೆಗಳ ಮೂಲಗಳನ್ನು ನಾಶಪಡಿಸಬೇಕು, ಶಾಲೆಯ ಆವರಣದಲ್ಲಿ ಎಲ್ಲಾದರೂ ತೆಂಗಿನ ಚಿಪ್ಪು, ಬಾಟೆಲ್ ಕವರ್ನಲ್ಲಿ ನೀರು ಸಂಗ್ರಹವಾಗಿದ್ದರೆ ತೆರವುಗೊಳಿಸಬೇಕು ಎಂದು ಸಲಹೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್