

ಬಳ್ಳಾರಿ, 16 ಜುಲೈ (ಹಿ.ಸ.)
ಆ್ಯಂಕರ್: ಭಾರತ ಸರ್ಕಾರದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ನಿರ್ದೇಶನದಂತೆ, ಬಳ್ಳಾರಿಯ ಉಪ ವಲಯ ಕಚೇರಿ ವತಿಯಿಂದ ಜುಲೈ 1 ರಿಂದ ಜುಲೈ 15, 2026 ರವರೆಗೆ ನಗರದಲ್ಲಿ ‘ರಾಷ್ಟ್ರೀಯ ಸ್ವಚ್ಛತಾ ಪಾಕ್ಷಿಕ' ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಈ ಅಭಿಯಾನದ ಅಂಗವಾಗಿ ನಗರದ ಹೈಸ್ಕೂಲ್ ಮೈದಾನ ಹಾಗೂ ಐತಿಹಾಸಿಕ ಬಳ್ಳಾರಿ ಕೋಟೆಯ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ಮತ್ತು ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಸಚಿವಾಲಯದ ವಿವಿಧ ಅಂಕಿ-ಅಂಶ ಇಲಾಖೆಗಳ ಕಾರ್ಯವೈಖರಿಯನ್ನು ಜನಸಾಮಾನ್ಯರಿಗೆ ಪರಿಚಯಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿತ್ತು.
*ಗಮನ ಸೆಳೆದ ಜಾಗೃತಿ ಜಾಥಾ:*
ಬುಧವಾರ ರಾಷ್ಟ್ರೀಯ ಅಂಕಿ-ಅಂಶ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಜಾಗೃತಿ ಜಾಥಾಗೆ ಗಣ್ಯರು ಚಾಲನೆ ನೀಡಿದರು. ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಚ್ಛತಾ ಘೋಷಣೆಗಳುಳ್ಳ ಫಲಕಗಳನ್ನು ಹಿಡಿದು ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಈ ಮೆರವಣಿಗೆಯು ನಗರದ ಪವನ್ ಹೋಟೆಲ್ ವೃತ್ತ, ಇಂದಿರಾ ವೃತ್ತ, ಗಡಿಗಿ ಚೆನ್ನಪ್ಪ ವೃತ್ತ, ಹೆಚ್.ಆರ್.ಗವಿಯಪ್ಪ ವೃತ್ತ ಹಾಗೂ ಹೊಸ ಬಸ್ ನಿಲ್ದಾಣಗಳ ಮೂಲಕ ಹಾದುಹೋಯಿತು. ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚುವ ಮೂಲಕ ಸ್ವಚ್ಛತೆಯ ಮಹತ್ವ ಹಾಗೂ ಅಂಕಿಅಂಶ ಇಲಾಖೆಯ ವಿವಿಧ ಸಮೀಕ್ಷೆಗಳ ಕುರಿತು ಮಾಹಿತಿ ನೀಡಲಾಯಿತು.
ವೈಯಕ್ತಿಕ ಮತ್ತು ಪರಿಸರ ಸ್ವಚ್ಛತೆಯಿಂದ ಸಾಂಕ್ರಾಮಿಕ ರೋಗಗಳನ್ನು ಹೇಗೆ ತಡೆಗಟ್ಟಬಹುದು ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಹೇಗೆ ಸಾಧ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲಾಯಿತು. ಮುಖ್ಯವಾಗಿ ಪ್ಲಾಸ್ಟಿಕ್ ಮುಕ್ತ ಪರಿಸರ ಮತ್ತು ಕಸದ ಸೂಕ್ತ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಲಾಯಿತು.
ದೇಶದ ಪ್ರಗತಿಯಲ್ಲಿ ಅಂಕಿ-ಅಂಶಗಳ ಮಹತ್ವ, ಸಚಿವಾಲಯದ ವಿವಿಧ ವಿಭಾಗಗಳು ನಡೆಸುವ ಸಾಮಾಜಿಕ-ಆರ್ಥಿಕ ಸಮೀಕ್ಷೆಗಳು ಮತ್ತು ದೇಶದ ಅಭಿವೃದ್ಧಿಯಲ್ಲಿ ಸಚಿವಾಲಯದ ಪಾತ್ರದ ಕುರಿತು ಜನಸಾಮಾನ್ಯರಿಗೆ ಸವಿಸ್ತಾರವಾಗಿ ವಿವರಿಸಲಾಯಿತು.
ಭಾರತ ಸರ್ಕಾರದ ಆರ್ಥಿಕ ಮತ್ತು ಅಂಕಿಅಂಶ ಸೇವೆಯ ಸಹಾಯಕ ನಿರ್ದೇಶಕ ಸಮೀರ್ ವಸಂತ್ ಪಾಟೀಲ್ ಅವರು ಅಭಿಯಾನದ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಇಲಾಖೆಯ ಹಿರಿಯ ಸಂಖ್ಯಾಶಾಸ್ತ್ರ ಅಧಿಕಾರಿಗಳಾದ ಅಮಿತ್ ಕುಮಾರ್, ಮಿಥಿಲೇಶ್ ವಿಶ್ವಕರ್ಮ, ವೀರಭದ್ರ ಸಿಂಗ್, ರಾಜ್ಕುಮಾರ್ ವರ್ಮಾ, ಮಹೇಶ್ ಕುಮಾರ್, ಸಂಜಯ್ ಶ್ರೀವಾಸ್ತವ ಹಾಗೂ ಸುನಿಲ್ ಬಾಬು ಉಪಸ್ಥಿತರಿದ್ದು ಸಕ್ರಿಯವಾಗಿ ಭಾಗವಹಿಸಿದ್ದರು. ಇವರೊಂದಿಗೆ ಕಚೇರಿಯ ಇತರ ಹಿರಿಯ ಅಧಿಕಾರಿಗಳು, ಕ್ಷೇತ್ರಕಾರ್ಯ ನಿರ್ವಹಿಸುವ ಸಮೀಕ್ಷಾ ಮೇಲ್ವಿಚಾರಕರು, ನಿಖರ ದತ್ತಾಂಶ ಸಂಗ್ರಹಿಸುವ ಗಣತಿದಾರರು ಹಾಗೂ ಕಚೇರಿಯ ಎಲ್ಲಾ ಹಂತದ ಸಿಬ್ಬಂದಿ ಅಭಿಯಾನದಲ್ಲಿ ಕೈಜೋಡಿಸಿದ್ದರು.
ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಾಮೂಹಿಕ ಶ್ರಮದಿಂದಾಗಿ ಈ ಅಭಿಯಾನವು ಯಶಸ್ವಿಯಾಗಿ ಮುಕ್ತಾಯಗೊಂಡಿತು. ಸಾರ್ವಜನಿಕರಿಂದಲೂ ಅಭಿಯಾನಕ್ಕೆ ಅತ್ಯುತ್ತಮ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು. ಕಚೇರಿ ಆವರಣದಲ್ಲಿ ಸ್ವಚ್ಛತಾ ಪ್ರತಿಜ್ಞಾ ವಿಧಿ ಸ್ವೀಕರಿಸುವುದರೊಂದಿಗೆ 15 ದಿನಗಳ ಈ ಜಾಗೃತಿ ಅಭಿಯಾನಕ್ಕೆ ತೆರೆಬಿದ್ದಿತು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್