

ಕೊಪ್ಪಳ, 15 ಜುಲೈ (ಹಿ.ಸ.)
ಆ್ಯಂಕರ್ : ಗಿಣಿಗೇರಿಯ ಕಲ್ಯಾಣಿ ಸ್ಟೀಲ್ಸ್ ಕಾರ್ಖಾನೆಯನ್ನು ಬಂದ್ ಮಾಡಿದ ಸಿಪಿಸಿಬಿ ಕ್ರಮವನ್ನು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯಿಂದ ಸ್ವಾಗತಿಸುತ್ತೇವೆ ಎಂದು ಜಂಟಿ ಕ್ರಿಯಾ ವೇದಿಕೆಯ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ 258ನೇ ದಿನದ ಧರಣಿ ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಮಾತು ಮುಂದುವರೆಸಿದ ಗೋನಾಳ ಕಲ್ಯಾಣಿ, ಕಿರ್ಲೋಸ್ಕರ್, ಅಲ್ಟ್ರಾಟೆಕ್ ಸಿಮೆಂಟ್, ಎಚ್.ಆರ್.ಜಿ ಅಲಾಯ್ಸ್, ಎಕ್ಸಿಂಡಿಯಾ, ಎಂ.ಎಸ್.ಪಿ.ಎಲ್, ಐ.ಎಲ್.ಸಿ, ಕೆ.ಪಿ.ಆರ್, ದೃವದೇಶ ಮುಂತಾದ 28 ಮಾಲಿನ್ಯಕಾರಕ ಬೃಹತ್ ಕಾರ್ಖಾನೆಗಳಲ್ಲಿ ಉತ್ತರ, ಈಶಾನ್ಯ ಭಾರತದ ಚೀಫ್ ಲೇಬರ್ ಬಳಸಿಕೊಂಡು ಅತ್ಯಂತ ಅಪಾಯಕಾರಿ ಕೆಲಸದಲ್ಲಿ ತೊಡಗಿಸುತ್ತಾರೆ.
ಕಲ್ಯಾಣಿ ಸ್ಟೀಲ್ಸ್ ಕಳೆದು 28 ವರ್ಷಗಳಿಂದ ಅಪರಿಮಿತ ಮಾಲಿನ್ಯ ಮಾಡಿದೆ. ಇದು ಯಾವತ್ತೋ ಬಂದಾಗಬೇಕಿತ್ತು. ಈಗಿನ ಕ್ರಮ ತಾತ್ಕಾಲಿಕವಾಗಿರದೆ ಶಾಶ್ವತವಾಗಿ ಬಂದಾಗಬೇಕು. ಆಗ ಮಾತ್ರ ಕೊಪ್ಪಳ-ಭಾಗ್ಯನಗರಕ್ಕೆ ಬಂದು ಬೀಳುವ ಕಪ್ಪು ಧೂಳು, ಕರಿಬೂದಿ ತಗ್ಗುತ್ತದೆ.
ಒಂದು ಚಿಮಣಿಯಿಂದ ಆರಂಭವಾದ ಕಲ್ಯಾಣಿ ಮುಕುಂದ್ ಸ್ಟಿಲ್ಸ್, ಹೊಸಪೇಟೆ ಸ್ಟೀಲ್ಸ್, ನಲ್ಲಿ ಇವತ್ತು 30 ಮಾಲಿನ್ಯ ಕಾರುವ ಚಿಮಿಣಿಗಳ ಎದ್ದು ನಿಂತಿವೆ. ಇದೇ ರೀತಿ ಕಿರ್ಲೋಸ್ಕರ್ ಕಾರ್ಖಾನೆ 23 ಚಿಮಿಣಿಗಳನ್ನು ಎದ್ದು ನಿಲ್ಲಿಸಿದೆ. ಈ ಕಾರ್ಖಾನೆಗಳ ಚಿಮಣಿ ಒಂದು ಇದ್ದಾಗಲೇ ಬೆಳೆಹಾನಿ, ಅಂತರ್ಜಲ ಹಾನಿಯಾಗಿದ್ದರ ಮೇಲೆ ದೂರಗಳು ದಾಖಲಾದವು.
ಹಾಗಾದರೆ ಈಗ ಒಂದೆ ಕಡೆ 50 ಚಿಮಿಣಿಗಳು ಎದ್ದು ನಿಂತು ಮಾಲಿನ್ಯ ಮಾಡುವಾಗ ಎಷ್ಟು ಸಮಸ್ಯೆ ಆಗಿರಬಹುದು. ಇದನ್ನು ಯಾರು ನಿಯಂತ್ರಿಸಬೇಕು. ಇಲ್ಲಿನ ಜನರು ಹೇಗೆ ಸಹಿಸಿಕೊಳ್ಳಬೇಕು. ತಡವಾಗಿಯಾದರೂ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಲ್ಯಾಣಿ ಕಾರ್ಖಾನೆಯನ್ನು ಜಲ ಮಾಲಿನ್ಯ ಮತ್ತು ವಾಯುಮಾಲಿನ್ಯದ ನಿಯಮಾವಳಿ ಉಲ್ಲಂಘನೆ ಮಾಡಿದ್ದರ ಆಧಾರದಲ್ಲಿ ಬಂದ್ ಮಾಡಿರುವುದನ್ನು ಕೊಪ್ಪಳ ಜನ ಸಂತಸದಿಂದ ಸ್ವಾಗತಿಸಿದ್ದಾರೆ.
ತುಂಗಭದ್ರಾ ತಟದಲ್ಲಿನ ಕಾರ್ಖಾನೆಗಳು ಜಲಾಶಯ, 22 ಹಳ್ಳಿಯ ಐವತ್ತು ಸಾವಿರ ಜನರಿಗೆ ಜೀವಕಂಠಕವಾಗಿವೆ ಇಲ್ಲಿನ ಕೃಷಿಯನ್ನು ಸಂಪೂರ್ಣ ಕಸಿದುಕೊಂಡಿವೆ. ಜನರ ಆರೋಗ್ಯವನ್ನು ಕಿತ್ತುಕೊಂಡಿವೆ. ಅಂತರ್ಜಲ ವಿಷಗೊಳಿಸಿವೆ. ಇಷ್ಟಿದ್ದೂ ಕಾರ್ಖಾನೆಗಳು ದರ್ಪದಿಂದ ತಮ್ಮ ಹಣದ ಪ್ರಭಾವ ಬಳಸಿ ಜನರ ಜೀವ ಹೋಗುವ ಮಟ್ಟಿಗೆ ಮಾಲಿನ್ಯ ಮಾಡುತ್ತಿವೆ. ಇಲ್ಲಿ ಜನರ ಗೋಳು ಆಲಿಸದ ರಾಜಕಾರಣಿಗಳು ಇರುವಾಗ ಇದರ ಲಾಭವನ್ನು ಕಾರ್ಖಾನೆಗಳು ಪಡೆದುಕೊಳ್ಳುತ್ತಿವೆ . ಈಗ ಅನಿವಾರ್ಯವಾಗಿ ವರ್ಷಗಟ್ಟಲೆ ಜನರು ಇಲ್ಲಿ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದುವರೆಗೆ ದೂರು ಸಲ್ಲಿಸುವವರ ಮೇಲೆ ಬೆದರಿಕೆ ಒಡ್ಡುವ ಕಂಪನಿಗಳು ಮತ್ತದೇ ತಮ್ಮ ಪ್ರಭಾವ ಬಳಸಿ ಮಾಲಿನ್ಯ ಮುಂದುವರಿಸಿ ಅಸ್ತಿತ್ವದಲ್ಲಿ ಉಳಿದುಕೊಳ್ಳಲು ಪ್ರಯತ್ನಿಸುತ್ತಿವೆ. ಇದು ಕೇವಲ ಕಲ್ಯಾಣಿ ಕಾರ್ಖಾನೆಯ ಒಂದೇ ಸಮಸ್ಯೆಯಲ್ಲ. ಈಗಾಗಲೇ ಎರಡು ಕಾರ್ಖಾನೆಗಳಿಗೆ ಬೀಗ ಜಡೆದಿರುವುದು ಸರಿಯಷ್ಟೇ. ಇನ್ನು ಮೂರು ಕಾರ್ಖಾನೆಗಳ ಮುಚ್ಚುವ ಆದೇಶ ಬಾಕಿ ಉಳಿದಿದೆ. 9 ಕಾರ್ಖಾನೆಗಳಿಗೆ ಕೊಟ್ಟ ಎನ್.ಪಿ.ಡಿ ಏನಾಯ್ತು ಎನ್ನುವುದು ತಿಳಿಯುತ್ತಿಲ್ಲ.
30 ವರ್ಷ ಜನರನ್ನು, ಇಲ್ಲಿನ ಪರಿಸರವನ್ನು ಸತಾಯಿಸಿದ ಕಂಪನಿಗಳು ತಮ್ಮ ಯಾವುದೇ ಉನ್ನತ ತಂತ್ರಜ್ಞಾನದಿಂದ ಮಾಲಿನ್ಯ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಈಗ ಅವುಗಳಿಗೆ ಉಳಿದಿರುವುದು ಒಂದೇ ದಾರಿ. ಬಂದಾಗಬೇಕು ಅಷ್ಟೇ. ಅದಾಗದಿದ್ದರೆ ಜನರ ಆರೋಗ್ಯ ಜೀವ ಉಳಿಯದು. ಈ ಸಂದರ್ಭದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರ ಮಂಡಳಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಗಂಭೀರವಾಗಿ ಇವುಗಳ ಮೇಲೆ ಕ್ರಮ ತೆಗೆದುಕೊಳ್ಳುವ ಸೂಕ್ತ ಸಮಯವಾಗಿದೆ. ಈ ನಡುವೆ ಬಲ್ಡೋಟ ಕಂಪನಿ 54,000 ಕೋಟಿ ಹೂಡಿಕೆಗೆ ಮುಂದಾದರೆ ಕೊಪ್ಪಳ-ಭಾಗ್ಯನಗರದ 1.5 ಲಕ್ಷ ಜನರ ಆರೋಗ್ಯದ ಮೇಲೆ ಪರಿಣಾಮ ಆಗುತ್ತದೆ ಎನ್ನುವ ಎಚ್ಚರಿಕೆಯನ್ನು ಇಟ್ಟುಕೊಳ್ಳಬೇಕು ಎಂದರು.
ಧರಣಿಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೆನ ಕಲಕೇರಿ, ಬಳ್ಳಾರಿ ಜಿಲ್ಲಾಧ್ಯಕ್ಷ ಎಂ.ಎಲ್.ಕೆ ನಾಯ್ಡು, ನಿವೃತ್ಥ ಪ್ರಾಚಾರ್ಯ ಬಿ.ಜಿ.ಕರಿಗಾರ, ಶಂಭುಲಿಂಗಪ್ಪ ಏಳುಭಾವಿ, ರಾಜಶೇಖರ ಏಳುಭಾವಿ, ಪರಮೇಶಪ್ಪ, ಮೂಕಪ್ಪ ಮೇಸ್ತ್ರಿ ಬಸಾಪುರ, ಅಮರೇಶ ಕರಡಿ, ಬಸವರಾಜ ಹೂಗಾರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಶೇಖಪ್ಪ ಮೈನಳ್ಳಿ, ಮಂಜುನಾಥ ದಿನ್ನಿ, ಮಲ್ಲಮ್ಮ ಚೆಲ್ಲಾರ, ಶಿವಮ್ಮ ಸಂಗಳದ, ಗವಿಸಿದ್ದಪ್ಪ ಮಾಲಿಪಾಟೀಲ್, ಶಿವಪ್ಪ ಜಲ್ಲಿ, ರಾಜಕುಮಾರ ತಂಬ್ರಹಳ್ಳಿ ಮುಂತಾದವರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್