ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಆಗ್ರಹ
ಗದಗ, 15 ಜುಲೈ (ಹಿ.ಸ.) ಆ್ಯಂಕರ್:- ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಕೂಡಲೇ ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರ ನೆರವಿಗೆ ಮುಂದಾಗಬೇಕು ಎಂದು ಬಿಜೆಪಿ ಗದಗ ಗ್ರಾಮೀಣ ಮಂಡಲ
ಫೋಟೋ


ಗದಗ, 15 ಜುಲೈ (ಹಿ.ಸ.)

ಆ್ಯಂಕರ್:- ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಕೂಡಲೇ ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರ ನೆರವಿಗೆ ಮುಂದಾಗಬೇಕು ಎಂದು ಬಿಜೆಪಿ ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿವೆ. ಮುಂಗಾರು ಆರಂಭದಲ್ಲೇ ರೈತರು ಉತ್ತಮ ಮಳೆಯ ನಿರೀಕ್ಷೆಯೊಂದಿಗೆ ಬಿತ್ತನೆ ಕಾರ್ಯ ಕೈಗೊಂಡಿದ್ದರೂ, ನಂತರ ಸಮರ್ಪಕ ಮಳೆಯಾಗದ ಕಾರಣ ಹೊಲಗಳಲ್ಲಿ ಬಿತ್ತಿದ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರಲ್ಲಿ ಭಾರೀ ಆತಂಕ ಮನೆ ಮಾಡಿದ್ದು, ಕೃಷಿಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಕುಟುಂಬಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ ಎಂದು ಹೇಳಿದರು.

ಗದಗ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಮಳೆಯ ಕೊರತೆಯಿಂದ ಜೋಳ, ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದೆ. ಕೆಲವು ಕಡೆಗಳಲ್ಲಿ ಬೆಳೆಗಳು ಸಂಪೂರ್ಣ ಒಣಗುವ ಹಂತ ತಲುಪಿದ್ದು, ಮತ್ತೊಮ್ಮೆ ಬಿತ್ತನೆ ಮಾಡಲು ರೈತರಿಗೆ ಆರ್ಥಿಕ ಸಾಮರ್ಥ್ಯವೂ ಉಳಿದಿಲ್ಲ. ಈಗಾಗಲೇ ರೈತರು ಬೀಜ, ಗೊಬ್ಬರ, ಕೀಟನಾಶಕ ಹಾಗೂ ಕೃಷಿ ಕಾರ್ಯಗಳಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದು, ಮಳೆ ಕೈಕೊಟ್ಟ ಪರಿಣಾಮ ಆ ಹೂಡಿಕೆಯೂ ನೀರಿನಲ್ಲಿ ಹೋಮವಾದಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹವಾಮಾನ ವೈಪರೀತ್ಯ, ಅಸಮರ್ಪಕ ಮಳೆ, ಬೆಳೆಹಾನಿ, ಇಳುವರಿ ಕುಸಿತ ಹಾಗೂ ಕೃಷಿ ಉತ್ಪನ್ನಗಳ ಮಾರುಕಟ್ಟೆ ದರದಲ್ಲಿನ ಏರಿಳಿತಗಳಿಂದ ರೈತರು ಬಹುಮುಖ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕೃಷಿ ಆದಾಯವೇ ಕುಟುಂಬದ ಪ್ರಮುಖ ಆಧಾರವಾಗಿರುವ ಸಂದರ್ಭದಲ್ಲಿ ಬೆಳೆ ಕೈಕೊಟ್ಟಿರುವುದರಿಂದ ರೈತರ ಜೀವನ ನಿರ್ವಹಣೆಯೇ ಕಷ್ಟಕರವಾಗಿದೆ ಎಂದು ಬೂದಪ್ಪ ಹಳ್ಳಿ ಹೇಳಿದರು.

ಸರ್ಕಾರ ಕೂಡಲೇ ಜಿಲ್ಲೆಯಲ್ಲಿ ಬೆಳೆ ಹಾನಿಯ ಸಮಗ್ರ ಸಮೀಕ್ಷೆ ನಡೆಸಬೇಕು. ಗದಗ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ತ್ವರಿತವಾಗಿ ವಿತರಿಸಬೇಕು. ಕೃಷಿ ಸಾಲಗಳ ವಸೂಲಾತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು, ಸಾಲ ಮರುಪಾವತಿಗೆ ಕಾಲಾವಕಾಶ ನೀಡುವುದು, ಬಡ್ಡಿ ಮನ್ನಾ ಸೇರಿದಂತೆ ರೈತಪರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.

ಅಲ್ಲದೆ, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರ್ಕಾರ ತುರ್ತು ಆಧಾರದ ಮೇಲೆ ಕಲ್ಪಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ರೈತರನ್ನು ಭೇಟಿ ಮಾಡಿ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಿ ಅಗತ್ಯ ತಾಂತ್ರಿಕ ಸಲಹೆ ಹಾಗೂ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಮಳೆ ವೈಫಲ್ಯದಿಂದ ಕೃಷಿ ಮಾತ್ರವಲ್ಲದೆ ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಮೇಲೆಯೂ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ರೈತರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಸರ್ಕಾರ ವಿಳಂಬ ಮಾಡದೆ ತುರ್ತು ಕ್ರಮಗಳನ್ನು ಕೈಗೊಂಡು ಜಿಲ್ಲೆಯ ರೈತರ ಹಿತಾಸಕ್ತಿಯನ್ನು ಕಾಪಾಡಬೇಕು. ಬರಪೀಡಿತ ಪ್ರದೇಶವೆಂದು ಘೋಷಿಸಿದರೆ ರೈತರಿಗೆ ಪರಿಹಾರ, ಸೌಲಭ್ಯಗಳು ಹಾಗೂ ವಿಶೇಷ ನೆರವು ದೊರೆಯಲಿದ್ದು, ಅವರ ಸಂಕಷ್ಟವನ್ನು ಸ್ವಲ್ಪ ಮಟ್ಟಿಗೆ ನಿವಾರಿಸಲು ಸಾಧ್ಯವಾಗಲಿದೆ ಎಂದು ಬೂದಪ್ಪ ಹಳ್ಳಿ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಸರ್ಕಾರ ತಕ್ಷಣ ಸ್ಪಂದಿಸಿ ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande