
ರಾಯಚೂರು , 15 ಜುಲೈ (ಹಿ.ಸ.):
ಆ್ಯಂಕರ್ : ರಾಯಚೂರು ಕೃಷಿ ಮಹಾವಿದ್ಯಾಲಯದಡಿ ಬರುವ 135 ಕೃಷಿ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇಂದಿನಿಂದ 70 ದಿನಗಳವರೆಗೆ ಈ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ರೈತರೊಂದಿಗೆ ಚರ್ಚೆ ಹಾಗೂ ಒಡನಾಟದೊಂದಿಗೆ ಅಲ್ಲಿನ ವಸ್ತುಸ್ಥಿತಿ ಅರಿಕೆಮಾಡಿಕೊಳ್ಳುವುದು, ಕೃಷಿ ಚಟುವಟಿಕೆಗಳ ವಿವಿಧ ಹಂತಗಳಲ್ಲಿ ಭಾಗವಹಿಸುವುದು, ಅಲ್ಲಿನ ಸಂಘ ಸಂಸ್ಥೆಗಳ ಅಧ್ಯಯನ ಮಾಡುವಿಕೆ, ಕೃಷಿ ವಸ್ತುಪ್ರದರ್ಶನ ಏರ್ಪಡಿಸುವಿಕೆ ಹೀಗೆ ಹಲವಾರು ಚಟುವಟಿಕೆಗಳನ್ನು ಕಲಿತುಕೊಳ್ಳುವರು.
ಈ ಶಿಬಿರವು ಕೃಷಿ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಕೌಶಲ್ಯ, ಗ್ರಾಮೀಣ ಪ್ರದೇಶದ ಅರಿವು ಹಾಗೂ ರೈತರ ಮನೋಭಾವವನ್ನು ಅರಿತುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಪ್ರಸ್ತುತ, 45 ವಿದ್ಯಾರ್ಥಿಗಳಂತೆ ಮಸ್ಕಿ ತಾಲ್ಲೂಕಿನ ಸಂತೆಕಲ್ಲೂರು, ಅಮೀನಗಡ ಮತ್ತು ವಟಗಲ್ ಗ್ರಾಮಗಳಲ್ಲಿ ಒಟ್ಟು 135 ವಿದ್ಯಾರ್ಥಿಗಳು ವಾಸ್ತವ್ಯ ಹೂಡುವರು.
ಈ ಶಿಬಿರಕ್ಕೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ ಅವರು ಚಾಲನೆ ನೀಡಿ, ನಂತರ ಮಾತಾನಾಡಿದ ಅವರು ಕೃಷಿ ಶಿಕ್ಷಣವು ಕೇವಲ ತರಗತಿ ಕೊಠಡಿಗೆ ಮಾತ್ರ ಸೀಮಿತವಾಗದೆ, ಹೊಲ-ಗದ್ದೆಗಳ ಅನುಭವದೊಂದಿಗೆ ಸಮೃದ್ಧವಾಗಬೇಕು. ವಿದ್ಯಾರ್ಥಿಗಳು ರೈತರೊಂದಿಗೆ ಬೆರೆತು ಅವರ ಕೃಷಿ ಪದ್ಧತಿಗಳು, ಸವಾಲುಗಳು ಹಾಗೂ ಅಗತ್ಯಗಳನ್ನು ತಿಳಿದುಕೊಳ್ಳಬೇಕು.
ಬೇಸಾಯಶಾಸ್ತ್ರ, ಮಣ್ಣು ಸಂರಕ್ಷಣೆ, ರೋಗ-ಕೀಟ ಹತೋಟಿ, ಬೀಜೋತ್ಪಾದನೆ, ಕೃಷಿ ಇಂಜಿನಿಯರಿಂಗ್ ತಂತ್ರಜ್ಞಾನ, ಜಾನುವಾರು ಸಾಕಾಣಿಕೆ, ಕೃಷಿ ಉತ್ಪಾದಕಗಳ ಮೌಲ್ಯವರ್ಧನೆ, ಇತ್ಯಾದಿಗಳ ಬಗ್ಗೆ ರೈತರ ಜಮೀನಿನಲ್ಲಿ ಪ್ರಾಯೋಗಿಕವಾಗಿ ತಿಳಿದುಕೊಳ್ಳಬೇಕೆಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರಾದ ಡಾ. ಗುರುರಾಜ ಸುಂಕದ, ಡೀನ್ರಾದ ಡಾ. ಜಗಜೀವನ್ ರಾಮ್, ಡೀನ್ (ವಿದ್ಯಾರ್ಥಿ ಕ್ಷೇಮಾಭಿವೃದ್ಧಿ) ಡಾ. ಜಾಗೃತಿ ಬಿ. ದೇಶಮಾನ್ಯ, ಡಾ. ಶಕುಂತಲಾ, ಡಾ. ಬಸವರಾಜ ಹುಲಗೂರ, ಡಾ ಅಶ್ವಥ್ಥನಾರಾಯಣ, ಡಾ. ಲೋಕೆಶ್, ಡಾ. ಸ್ವಪ್ನಾ ಹಾಗೂ ಡಾ. ಚನ್ನಪ್ಪ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್