ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಬರಪೀಡಿತ ಜಮೀನುಗಳಿಗೆ ಜೆಡಿಎಸ್ ನಿಯೋಗ ಭೇಟಿ
ಬಾಗಲಕೋಟೆ, 15 ಜುಲೈ (ಹಿ.ಸ.) ಆ್ಯಂಕರ್ : ಉತ್ತರ ಕರ್ನಾಟಕದಲ್ಲಿ ತೀವ್ರ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಬುಧವಾರ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಬರಪೀಡಿತ ಜಮೀನುಗಳಿಗೆ ಭೇಟಿ ನ
ಬರಗಾಲ


ಬಾಗಲಕೋಟೆ, 15 ಜುಲೈ (ಹಿ.ಸ.)

ಆ್ಯಂಕರ್ : ಉತ್ತರ ಕರ್ನಾಟಕದಲ್ಲಿ ತೀವ್ರ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಬುಧವಾರ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಬರಪೀಡಿತ ಜಮೀನುಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಈ ವೇಳೆ ರೈತರೊಂದಿಗೆ ನೇರವಾಗಿ ಸಂವಾದ ನಡೆಸಿದ ಅವರು, ಬೆಳೆ ಹಾನಿ, ನೀರಿನ ಅಭಾವ ಹಾಗೂ ಕೃಷಿ ಸಂಕಷ್ಟಗಳ ಕುರಿತು ರೈತರು ಸಲ್ಲಿಸಿದ ಅಹವಾಲುಗಳನ್ನು ಆಲಿಸಿ ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರು.

ಹಲಕುರ್ಕಿ ಗ್ರಾಮದ ವಿವಿಧ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ ಅವರು ಬೆಳೆಗಳು ಒಣಗಿ ನಿಂತಿರುವ ದೃಶ್ಯವನ್ನು ವೀಕ್ಷಿಸಿ, ಮಳೆ ಕೊರತೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಮಾಹಿತಿ ಪಡೆದುಕೊಂಡರು. ರೈತರು ತಮ್ಮ ಹೊಲಗಳಲ್ಲೇ ನಿಂತು ಬೆಳೆ ಹಾನಿ, ಬಿತ್ತನೆಗೆ ಮಾಡಿದ ಸಾಲ, ಕುಡಿಯುವ ಹಾಗೂ ನೀರಾವರಿ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವು ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ವಿವರಿಸಿದರು.

ರೈತರ ಅಹವಾಲುಗಳಿಗೆ ಸ್ಪಂದಿಸಿದ ನಿಖಿಲ್ ಕುಮಾರಸ್ವಾಮಿ ಅವರು, ರಾಜ್ಯ ಸರ್ಕಾರ ತಕ್ಷಣವೇ ಬರಪೀಡಿತ ಪ್ರದೇಶಗಳನ್ನು ಅಧಿಕೃತವಾಗಿ ಗುರುತಿಸಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬೆಳೆ ನಷ್ಟಕ್ಕೆ ವೈಜ್ಞಾನಿಕ ಸಮೀಕ್ಷೆ ನಡೆಸಿ ಸಮರ್ಪಕ ಪರಿಹಾರವನ್ನು ಶೀಘ್ರದಲ್ಲೇ ರೈತರಿಗೆ ವಿತರಿಸಬೇಕು. ಕೃಷಿ ಸಾಲದ ಮರುಪಾವತಿಗೆ ಕಾಲಾವಕಾಶ ನೀಡುವುದರ ಜೊತೆಗೆ ಬಡ್ಡಿ ಮನ್ನಾ, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರ್ಕಾರ ಆದ್ಯತೆಯ ಮೇರೆಗೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬರ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ರಾಜಕೀಯವನ್ನು ಬದಿಗಿಟ್ಟು ರೈತರ ನೆರವಿಗೆ ಧಾವಿಸಬೇಕು. ರಾಜ್ಯದ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರದ ಮುಂದೆ ಮಂಡಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಹಲಕುರ್ಕಿ ಗ್ರಾಮದ ರೈತರು ಉಪಸ್ಥಿತರಿದ್ದರು. ಭೇಟಿ ವೇಳೆ ರೈತರು ತಮ್ಮ ಸಮಸ್ಯೆಗಳನ್ನು ವಿವರವಾಗಿ ತಿಳಿಸಿದರೆ, ನಿಖಿಲ್ ಕುಮಾರಸ್ವಾಮಿ ಅವರು ಪ್ರತಿಯೊಂದು ಅಹವಾಲನ್ನು ಆಲಿಸಿ ಅಗತ್ಯ ಕ್ರಮಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಭರವಸೆ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande