
ಬಾಗಲಕೋಟೆ, 15 ಜುಲೈ (ಹಿ.ಸ.)
ಆ್ಯಂಕರ್ : ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಬುಧವಾರ ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ಶಕ್ತಿಪೀಠವಾದ ಬನಶಂಕರಿದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯದ ಸುಭಿಕ್ಷತೆ, ಉತ್ತಮ ಮಳೆ, ರೈತರ ಸಂಕಷ್ಟ ನಿವಾರಣೆ ಹಾಗೂ ಜನರ ನೆಮ್ಮದಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಜೆಡಿಎಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಸೇರಿದಂತೆ ಪಕ್ಷದ ಹಲವು ಮುಖಂಡರು ಮತ್ತು ಕಾರ್ಯಕರ್ತರು ದೇವಸ್ಥಾನಕ್ಕೆ ಆಗಮಿಸಿ ಬನಶಂಕರಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದರು.
ದೇವಾಲಯದ ಅರ್ಚಕರು ವಿಶೇಷ ಪೂಜೆ ನೆರವೇರಿಸಿ ಪ್ರಸಾದ ವಿತರಿಸಿದರು.
ಇತ್ತೀಚೆಗೆ ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡುತ್ತಿರುವ ನಿಖಿಲ್ ಕುಮಾರಸ್ವಾಮಿ ಅವರು, ಜಿಲ್ಲೆಯ ಪ್ರವಾಸದ ಭಾಗವಾಗಿ ಬನಶಂಕರಿ ದೇವಿಯ ಸನ್ನಿಧಿಗೆ ಭೇಟಿ ನೀಡಿ ರಾಜ್ಯದ ಜನತೆಗೆ ಒಳಿತಾಗಲಿ ಹಾಗೂ ರೈತರ ಬದುಕಿನಲ್ಲಿ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ದೇವಾಲಯದ ಆವರಣದಲ್ಲಿ ಜೆಡಿಎಸ್ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಅವರು ಕಾರ್ಯಕರ್ತರೊಂದಿಗೆ ಕೆಲಕಾಲ ಮಾತುಕತೆ ನಡೆಸಿ ಪಕ್ಷ ಸಂಘಟನೆ ಹಾಗೂ ಜನಸೇವೆಯಲ್ಲಿ ಇನ್ನಷ್ಟು ಚುರುಕಾಗಿ ತೊಡಗಿಕೊಳ್ಳುವಂತೆ ಕರೆ ನೀಡಿದರು.
ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಜೆಡಿಎಸ್ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಭಕ್ತರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande