
ಬಾಗಲಕೋಟೆ, 15 ಜುಲೈ (ಹಿ.ಸ.):
ಆ್ಯಂಕರ್ : ಸಾಲ ನೀಡುವ ಭರವಸೆ ನೀಡಿ ಮಹಿಳೆಯರಿಂದ ಹಣ ಸಂಗ್ರಹಿಸಿಕೊಂಡು, ಹಲವು ವರ್ಷಗಳಾದರೂ ಸಾಲ ನೀಡದೇ ಹಾಗೂ ಸಂಗ್ರಹಿಸಿದ ಹಣವನ್ನೂ ಹಿಂದಿರುಗಿಸದೆ ವಂಚಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ
ಬೀಳಗಿ ಪಟ್ಟಣದಲ್ಲಿ ನೂರಾರು ಮಹಿಳೆಯರು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಚೇರಿ ಎದುರು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆದಿದೆ.
ಮಾಹಿತಿಯ ಪ್ರಕಾರ, ದುರ್ಗಾದೇವಿ ಸಂಸ್ಥೆಯಡಿ 250ಕ್ಕೂ ಹೆಚ್ಚು ಮಹಿಳಾ ಸಂಘಗಳನ್ನು ರಚಿಸಿ, ಸದಸ್ಯೆಯರಿಂದ ಪ್ರತಿ ವಾರ ₹20, ₹50 ಹಾಗೂ ₹100ರಂತೆ ಉಳಿತಾಯದ ಹೆಸರಿನಲ್ಲಿ ಹಣ ಸಂಗ್ರಹಿಸಲಾಗುತ್ತಿತ್ತು. ಸಂಸ್ಥೆಯ ನಿಯಮಾನುಸಾರ ನಿರ್ದಿಷ್ಟ ಅವಧಿಯ ಬಳಿಕ ಸದಸ್ಯೆಯರಿಗೆ ಸಾಲ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಲಾಗಿತ್ತು ಎನ್ನಲಾಗಿದೆ.
ಆದರೆ ಮೂರು ವರ್ಷಕ್ಕೂ ಹೆಚ್ಚು ಕಾಲ ಕಳೆದರೂ ಸಂಘದ ಅನೇಕ ಸದಸ್ಯೆಯರಿಗೆ ಯಾವುದೇ ಸಾಲ ನೀಡಲಾಗಿಲ್ಲ ಎಂದು ಮಹಿಳೆಯರು ಆರೋಪಿಸಿದ್ದಾರೆ. ಇದಲ್ಲದೆ, ತಾವು ತುಂಬಿರುವ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಅಧ್ಯಕ್ಷರು ಸ್ಪಷ್ಟ ಉತ್ತರ ನೀಡದೇ, ದಿನಾಂಕ ಮುಂದೂಡುತ್ತಾ ಸತಾಯಿಸಿದ್ದಾರೆ ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.
ಈ ಬೆಳವಣಿಗೆಯಿಂದ ಆಕ್ರೋಶಗೊಂಡ ನೂರಾರು ಮಹಿಳೆಯರು ಸಂಸ್ಥೆಯ ಕಚೇರಿ ಎದುರು ಜಮಾಯಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕು, ತಮ್ಮ ಹಣವನ್ನು ತಕ್ಷಣವೇ ಹಿಂದಿರುಗಿಸಬೇಕು ಹಾಗೂ ವಂಚನೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
ಘಟನಾ ಸ್ಥಳಕ್ಕೆ ಆಗಮಿಸಿದ ಬೀಳಗಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಹೊರಬರಬೇಕಿದ್ದು, ಹಣ ಕಳೆದುಕೊಂಡಿರುವ ಮಹಿಳೆಯರಿಗೆ ನ್ಯಾಯ ಒದಗಿಸುವಂತೆ ಸಾರ್ವಜನಿಕರು ಹಾಗೂ ಮಹಿಳಾ ಸಂಘಗಳ ಸದಸ್ಯರು ಒತ್ತಾಯಿಸಿದ್ದಾರೆ. ಈ ಘಟನೆ ಬೀಳಗಿ ಪಟ್ಟಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಹಣಕಾಸು ವ್ಯವಹಾರ ನಡೆಸುವ ಸ್ವಯಂಸೇವಾ ಸಂಸ್ಥೆಗಳ ಕಾರ್ಯವೈಖರಿಯ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande