
ಬೆಂಗಳೂರು, 15 ಜುಲೈ (ಹಿ.ಸ.):
ಆ್ಯಂಕರ್:
ಅಪಾರ್ಟ್‌ಮೆಂಟ್ ನಿವಾಸಿಗಳ ಹಕ್ಕುಗಳ ರಕ್ಷಣೆ ಹಾಗೂ ಮಾಲೀಕರಿಗೆ ಕಾನೂನುಬದ್ಧ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ನೆಹರು ತಾರಾಲಯದಲ್ಲಿ ಬುಧವಾರ ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ)–2026 ಕರಡು ಮಸೂದೆ ಕುರಿತು ಅಪಾರ್ಟ್‌ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಆಗಸ್ಟ್ 6ರವರೆಗೆ ಸಾರ್ವಜನಿಕರು, ಅಪಾರ್ಟ್‌ಮೆಂಟ್ ಸಂಘಗಳು ಹಾಗೂ ಶಾಸಕರು ತಮ್ಮ ಸಲಹೆ-ಸೂಚನೆಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು.
ಆಸ್ತಿ ಖರೀದಿಸಿದ ಬಳಿಕ ಅದರ ಸಂಪೂರ್ಣ ಹಕ್ಕು ಮಾಲೀಕರಿಗೇ ಸೇರಬೇಕು ಎಂಬುದು ಸರ್ಕಾರದ ಸ್ಪಷ್ಟ ನಿಲುವು. ಎಲ್ಲರ ಅಭಿಪ್ರಾಯಗಳನ್ನು ಪರಿಗಣಿಸಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಯಾವುದೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಹೇಳಿದರು.
ಸಾರ್ವಜನಿಕರು ತಮ್ಮ ಸಲಹೆಗಳನ್ನು ತಮಗೆ ಹಾಗೂ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ನೇರವಾಗಿ ಸಲ್ಲಿಸಬಹುದು. ಡೆವಲಪರ್‌ಗಳೊಂದಿಗೂ ಸಭೆ ನಡೆಸಿ ಕಾನೂನು ಪಾಲನೆ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸುಮಾರು 40 ಲಕ್ಷ ಆಸ್ತಿಗಳಿದ್ದು, ಈಗಾಗಲೇ 26 ಲಕ್ಷ ಆಸ್ತಿಗಳಿಗೆ ಇ-ಖಾತೆ ನೀಡಲಾಗಿದೆ. ಕೆಲವರು ಕಟ್ಟಡ ನಿರ್ಮಾಣ ನಿಯಮಗಳನ್ನು ಉಲ್ಲಂಘಿಸಿದ್ದರೂ, ಬಹುತೇಕ ಕಟ್ಟಡ ನಿರ್ಮಾಪಕರು ಕಾನೂನುಬದ್ಧವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ವಿಶೇಷವಾಗಿ ಸಣ್ಣ ಬಿಲ್ಡರ್‌ಗಳು ಕಂದಾಯ ಭೂಮಿಯಲ್ಲಿ ಗುಣಮಟ್ಟವಿಲ್ಲದ ಕಟ್ಟಡ ನಿರ್ಮಿಸಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಪಾರ್ಟ್‌ಮೆಂಟ್ ಸಂಘಗಳಲ್ಲಿನ ಕೆಲವರ ವರ್ತನೆಯಿಂದ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಹೇಳಿದ ಮುಖ್ಯಮಂತ್ರಿ, ತಾವು ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾಗ ನೋಂದಣಿಗೆ ಮುನ್ನವೇ ತಮ್ಮ ಹೆಸರನ್ನು ನೋಟಿಸ್ ಬೋರ್ಡ್‌ನಲ್ಲಿ ಪ್ರದರ್ಶಿಸಿ ಪ್ರವೇಶಕ್ಕೂ ತಡೆಯೊಡ್ಡಲು ಯತ್ನಿಸಿದ್ದ ಘಟನೆಗಳನ್ನು ನೆನಪಿಸಿಕೊಂಡರು.
ಜನರು ಜೀವನಪೂರ್ತಿ ದುಡಿದು ಮನೆ ಖರೀದಿಸುತ್ತಾರೆ. ಆ ಆಸ್ತಿಯ ಮೇಲೆ ಅವರ ಹಕ್ಕು ಸುರಕ್ಷಿತವಾಗಿರಬೇಕು. ಇದೇ ಉದ್ದೇಶದಿಂದ ಸರ್ಕಾರ ಇ-ಖಾತೆ ವ್ಯವಸ್ಥೆ ಜಾರಿಗೆ ತಂದಿದ್ದು, ಲಂಚವಿಲ್ಲದೆ ಮಾಲೀಕರ ಭಾವಚಿತ್ರದೊಂದಿಗೆ ಖಾತೆ ನೀಡುವ ವ್ಯವಸ್ಥೆ ದೇಶದಲ್ಲೇ ಮಾದರಿಯಾಗಿದೆ ಎಂದು ಹೇಳಿದರು.
ಅಪಾರ್ಟ್‌ಮೆಂಟ್‌ಗಳಲ್ಲಿ ಒಳಚರಂಡಿ ಶುದ್ಧೀಕರಣ ಘಟಕ (ಎಸ್‌ಟಿಪಿ) ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ವಿಶೇಷ ಗಮನ ನೀಡುವಂತೆ ಸಂಘಗಳಿಗೆ ಸಲಹೆ ನೀಡಿದ ಅವರು, ಕಾವೇರಿ ಐದನೇ ಹಂತದ ಯೋಜನೆಯ ಮೂಲಕ ಹೆಚ್ಚಿನ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು. ದಾಖಲೆ ವರ್ಗಾವಣೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಡೆವಲಪರ್‌ಗಳೊಂದಿಗೆ ಸರ್ಕಾರ ಮಾತುಕತೆ ನಡೆಸಲಿದೆ ಎಂದರು.
ಅಧಿಕಾರ ವಿಕೇಂದ್ರೀಕರಣದ ಉದ್ದೇಶದಿಂದ ನಗರದಲ್ಲಿ ಐದು ನಗರ ಪಾಲಿಕೆಗಳನ್ನು ರಚಿಸಲಾಗಿದ್ದು, ವಿವಿಧ ಭಾಗಗಳ ನಾಗರಿಕ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ವ್ಯಾಜ್ಯಗಳಿಗೆ ಹೋಗುವ ಬದಲು ಸಂವಾದದ ಮೂಲಕ ಸಮಸ್ಯೆಗಳನ್ನು ಬಗೆಹರಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದರು.
ಬಡವರಿಗೂ ಮನೆ ನಿರ್ಮಿಸಲು ಅಗತ್ಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ಮನೆ ಬಾಗಿಲಿಗೇ ದಾಖಲೆಗಳನ್ನು ತಲುಪಿಸುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ ಎಂದು ತಿಳಿಸಿದರು.
ನಗರದಲ್ಲಿ ಎತ್ತರದ ಕಟ್ಟಡಗಳ ನಿರ್ಮಾಣಕ್ಕೆ ಉತ್ತೇಜನ ನೀಡಲಾಗುತ್ತಿದ್ದು, 132 ಕಿಲೋಮೀಟರ್ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ) ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅಗಲವಾದ ರಸ್ತೆಗಳಿರುವ ಪ್ರದೇಶಗಳಲ್ಲಿ ಮಾತ್ರ ಎತ್ತರದ ಕಟ್ಟಡಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ದಾವೋಸ್ ಸೇರಿದಂತೆ ಜಾಗತಿಕ ಹೂಡಿಕೆ ವೇದಿಕೆಗಳಲ್ಲಿ ಬೆಂಗಳೂರು ಬಗ್ಗೆ ಹೆಚ್ಚಿನ ಆಸಕ್ತಿ ವ್ಯಕ್ತವಾಗುತ್ತಿದೆ. ಕಡಿಮೆ ವೆಚ್ಚ, ಉತ್ತಮ ಶಿಕ್ಷಣ, ತಂತ್ರಜ್ಞಾನ ಪರಿಸರ ಹಾಗೂ ಮೂಲಸೌಕರ್ಯಗಳಿಂದ ಬೆಂಗಳೂರು ಹೂಡಿಕೆದಾರರ ಮೊದಲ ಆಯ್ಕೆಯಾಗಿದೆ. ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಸರ್ಕಾರ ಸ್ಥಳ ಹುಡುಕುತ್ತಿದೆ. ಬೆಂಗಳೂರು ರಾಜ್ಯದಷ್ಟೇ ಅಲ್ಲ, ಭಾರತದ ಹೃದಯದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.