
ಬಾಗಲಕೋಟೆ, 15 ಜುಲೈ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಸಭಾ ಕ್ಷೇತ್ರದ ತುಳಸಿಗೇರಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಪಕ್ಷ ಸಂಘಟನಾ ಬಲವರ್ಧನೆಗೆ ಸಂಬಂಧಿಸಿದ ಮಹತ್ವದ ಸಮಾಲೋಚನಾ ಸಭೆ ಬುಧವಾರ ಮಾಜಿ ಸಚಿವರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಡಾ. ಮುರುಗೇಶ್ ಆರ್. ನಿರಾಣಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ಬೂತ್ ಅಧ್ಯಕ್ಷರು, ಬಿ.ಎಲ್.-2 ಪ್ರಮುಖರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಕುರಿತು ಸಮಗ್ರ ಚರ್ಚೆ ನಡೆಸಿದರು. ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ವಹಿಸಬೇಕಾದ ಜವಾಬ್ದಾರಿಗಳು, ಮನೆ ಮನೆ ಸಂಪರ್ಕ ಅಭಿಯಾನ, ಹೊಸ ಮತದಾರರ ನೋಂದಣಿ, ಮತದಾರರ ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮುರುಗೇಶ್ ಆರ್. ನಿರಾಣಿ, ಪ್ರಜಾಪ್ರಭುತ್ವದ ಯಶಸ್ಸಿಗೆ ನಿಖರವಾದ ಮತದಾರರ ಪಟ್ಟಿ ಅತ್ಯಂತ ಅವಶ್ಯಕವಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು. ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನವನ್ನು ಯಶಸ್ವಿಗೊಳಿಸಲು ಪ್ರತಿಯೊಂದು ಬೂತ್ನಲ್ಲಿ ಕಾರ್ಯಕರ್ತರು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಪಕ್ಷದ ಸಂಘಟನೆಯೇ ಬಿಜೆಪಿಯ ಪ್ರಮುಖ ಶಕ್ತಿಯಾಗಿದ್ದು, ಕಾರ್ಯಕರ್ತರ ಸಮರ್ಪಣೆ ಮತ್ತು ಸಂಘಟಿತ ಕಾರ್ಯವೈಖರಿಯಿಂದಲೇ ಪಕ್ಷ ನಿರಂತರವಾಗಿ ಜನರ ವಿಶ್ವಾಸ ಗಳಿಸುತ್ತಿದೆ. ಮುಂಬರುವ ದಿನಗಳಲ್ಲಿ ಪಕ್ಷದ ಕಾರ್ಯಕ್ರಮಗಳು ಹಾಗೂ ಜನಸಂಪರ್ಕ ಅಭಿಯಾನಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವ ಮೂಲಕ ಸಂಘಟನೆಯನ್ನು ತಳಮಟ್ಟದಲ್ಲಿ ಬಲಪಡಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ವಿವಿಧ ಬೂತ್ಗಳ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸಿ, ಕಾರ್ಯಕರ್ತರ ಅಭಿಪ್ರಾಯಗಳನ್ನು ಆಲಿಸಲಾಯಿತು. ಕ್ಷೇತ್ರದ ಅಭಿವೃದ್ಧಿ, ಜನಸಂಪರ್ಕ ಕಾರ್ಯಕ್ರಮಗಳು ಹಾಗೂ ಪಕ್ಷದ ಮುಂದಿನ ಕಾರ್ಯಯೋಜನೆ ಕುರಿತು ಸಹ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಹೂವಪ್ಪ ರಾಠೋಡ್, ಶ್ರೀನಿವಾಸ ಪೂಜಾರಿ, ಶಿವಪುತ್ರಪ್ಪ ದಾಸನ್ನವರ, ಬಸೆಟ್ಟಿ ಅಂಗಡಿ, ವೆಂಕಣ್ಣ ಬಾಲರೆಡ್ಡಿ, ವಿಠ್ಠಲ ಯತ್ನಟ್ಟಿ, ಗೋವಿಂದಪ್ಪ ಲಾಯನ್ನವರ, ವಿಠ್ಠಲ್ ಸೊನ್ನದ, ಗಿರಿಯಪ್ಪ ಲೋಕುರ ಸೇರಿದಂತೆ ಪಕ್ಷದ ಮುಂಚೂಣಿ ಪದಾಧಿಕಾರಿಗಳು, ಬೂತ್ ಅಧ್ಯಕ್ಷರು, ಬಿ.ಎಲ್.-2 ಪ್ರಮುಖರು ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಭೆಯು ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಸಂಕಲ್ಪದೊಂದಿಗೆ ಸಮಾರೋಪಗೊಂಡಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande