'ಶಾಶ್ವತ ನಿವಾಸ ಪ್ರಮಾಣಪತ್ರ' ಪ್ರಸ್ತಾವನೆ ಹಿಂಪಡೆಯುವಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ
ಬೆಂಗಳೂರು, 15 ಜುಲೈ (ಹಿ.ಸ.): ಆ್ಯಂಕರ್: ರಾಜ್ಯ ಸರ್ಕಾರದ ''ಶಾಶ್ವತ ನಿವಾಸ ಪ್ರಮಾಣಪತ್ರ'' (ಪಿಆರ್‌ಸಿ) ಪ್ರಸ್ತಾವನೆ ಸಂವಿಧಾನಬಾಹಿರವಾಗಿದ್ದು, ರಾಜ್ಯದ ಸುರಕ್ಷತೆ ಹಾಗೂ ಕನ್ನಡಿಗರ ಹಕ್ಕುಗಳಿಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಆರೋಪಿಸಿ, ಪ್ರತಿಪಕ್ಷ ನಾಯಕ ಆರ್. ಅಶೋಕ ಅವರ ನೇತೃತ್ವದಲ್ಲಿ ಬಿ
ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಿಜೆಪಿ ನಿಯೋಗ


ಬೆಂಗಳೂರು, 15 ಜುಲೈ (ಹಿ.ಸ.):

ಆ್ಯಂಕರ್:

ರಾಜ್ಯ ಸರ್ಕಾರದ 'ಶಾಶ್ವತ ನಿವಾಸ ಪ್ರಮಾಣಪತ್ರ' (ಪಿಆರ್‌ಸಿ) ಪ್ರಸ್ತಾವನೆ ಸಂವಿಧಾನಬಾಹಿರವಾಗಿದ್ದು, ರಾಜ್ಯದ ಸುರಕ್ಷತೆ ಹಾಗೂ ಕನ್ನಡಿಗರ ಹಕ್ಕುಗಳಿಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಆರೋಪಿಸಿ, ಪ್ರತಿಪಕ್ಷ ನಾಯಕ ಆರ್. ಅಶೋಕ ಅವರ ನೇತೃತ್ವದಲ್ಲಿ ಬಿಜೆಪಿ ನಿಯೋಗವು ಇಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಲೋಕಭವನದಲ್ಲಿ ಭೇಟಿ ಮಾಡಿ ಅಧಿಕೃತ ಮನವಿ ಸಲ್ಲಿಸಿತು.

ಮನವಿಯಲ್ಲಿ, ಪೌರತ್ವ, ವಿದೇಶಿಯರ ಗುರುತಿಸುವಿಕೆ ಮತ್ತು ವಲಸೆ ಸಂಬಂಧಿತ ವಿಷಯಗಳು ಭಾರತದ ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು 'ಶಾಶ್ವತ ನಿವಾಸ ಪ್ರಮಾಣಪತ್ರ' ನೀಡುವ ಅಧಿಕಾರವನ್ನು ತನ್ನದಾಗಿಸಿಕೊಳ್ಳಲು ಮುಂದಾಗಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದು, ಒಕ್ಕೂಟ ವ್ಯವಸ್ಥೆಗೂ ಧಕ್ಕೆ ತರುವ ಕ್ರಮವಾಗಿದೆ ಎಂದು ಬಿಜೆಪಿ ತಿಳಿಸಿದೆ.

ದೇಶಾದ್ಯಂತ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿರುವ ಸಂದರ್ಭದಲ್ಲಿ ಇಂತಹ ಸಡಿಲ ನಿಯಮಗಳನ್ನು ಜಾರಿಗೊಳಿಸುವುದರಿಂದ ಅಕ್ರಮ ವಲಸಿಗರು ನಕಲಿ ದಾಖಲೆಗಳ ಮೂಲಕ ಪ್ರಮಾಣಪತ್ರ ಪಡೆದು ಮತದಾನದ ಹಕ್ಕು ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ನಿಯೋಗ ರಾಜ್ಯಪಾಲರ ಗಮನಕ್ಕೆ ತಂದಿದೆ.

ಪ್ರಮಾಣಪತ್ರ ವಿತರಣೆಯ ಅಧಿಕಾರವನ್ನು ಕಂದಾಯ ಇಲಾಖೆಗೆ ನೀಡಿರುವುದು ಭ್ರಷ್ಟಾಚಾರ, ನಕಲಿ ದಾಖಲೆಗಳ ಸೃಷ್ಟಿ ಹಾಗೂ ಆಡಳಿತ ವ್ಯವಸ್ಥೆಯ ದುರುಪಯೋಗಕ್ಕೆ ಅವಕಾಶ ಕಲ್ಪಿಸಬಹುದು ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ. ಜೊತೆಗೆ, ಈ ಪ್ರಸ್ತಾವನೆಯಿಂದ ಸ್ಥಳೀಯ ಕನ್ನಡಿಗರ ಶಿಕ್ಷಣ, ಉದ್ಯೋಗ ಮತ್ತು ವಿವಿಧ ಅವಕಾಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ, ಅಧಿಸೂಚನೆ ಹೊರಡಿಸುವ ಮುನ್ನ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲಾಗಿದೆಯೇ, ಭಾರತೀಯ ಪೌರತ್ವ ಪರಿಶೀಲನೆಗೆ ಯಾವ ಕಾನೂನುಬದ್ಧ ಕ್ರಮ ಅನುಸರಿಸಲಾಗಿದೆ ಎಂಬ ಕುರಿತು ಸಮಗ್ರ ವರದಿ ಪಡೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಪಾಲರನ್ನು ಕೋರಿದೆ. ಅಲ್ಲದೆ, ಈ ವಿವಾದಾತ್ಮಕ ಪ್ರಸ್ತಾವನೆಯನ್ನು ತಕ್ಷಣವೇ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದೆ.

ಇದೇ ವೇಳೆ, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾದ ಬಳಿಕ ನ್ಯಾಯಾಲಯಗಳು ಹಾಗೂ ಲೋಕ ಅದಾಲತ್‌ಗಳ ಮೂಲಕ ವಿತರಿಸಲಾದ ಜನನ ಪ್ರಮಾಣಪತ್ರಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಹ ಬಿಜೆಪಿ ಒತ್ತಾಯಿಸಿದೆ.

ಕನ್ನಡಿಗರ ಹಕ್ಕುಗಳು, ಸಂವಿಧಾನದ ಗೌರವ ಹಾಗೂ ದೇಶದ ಆಂತರಿಕ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಈ ವಿಚಾರದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande