
ಕೊಪ್ಪಳ , 15 ಜುಲೈ (ಹಿ.ಸ.)
ಆ್ಯಂಕರ್ : ಕೃಷಿ ಇಲಾಖೆಯಿಂದ 2026-27ನೇ ಸಾಲಿನ ಕೃಷಿ ಪ್ರಶಸ್ತಿ ಕಾರ್ಯಕ್ರಮದಡಿ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕೃಷಿ ಪ್ರಶಸ್ತಿ ಕಾರ್ಯಕ್ರಮವು ಚಾಲ್ತಿ ಯೋಜನೆಯಾಗಿದ್ದು, ಸರ್ಕಾರಿ ಆದೇಶದನ್ವಯ 2026-27ನೇ ಸಾಲಿನಲ್ಲಿಯೂ ಮುಂದುವರಿಸಲಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಕೃಷಿ ಪ್ರಶಸ್ತಿ ಮಾರ್ಗಸೂಚಿಯ ಕೆಲವು ಮಾನದಂಡಗಳನ್ನು ಪರಿಷ್ಕರಿಸಿ ಕೃಷಿ ಪ್ರಶಸ್ತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು.
ಕೆ-ಕಿಸಾನ ಪೋರ್ಟಲ್ (K-Kisan Portal) ರಡಿ ಸಿಟಿಜನ್ ಲಾಗಿನ್ ಅಥವಾ ಆರ್.ಎಸ್.ಕೆ ಲಾಗಿನ್ ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ, ನಾಗರಿಕ ಸೇವಾ ಕೇಂದ್ರ ಅಥವಾ ಸ್ವತಃ ಆಸಕ್ತ ರೈತ ಮತ್ತು ರೈತ ಮಹಿಳೆಯರು ಪ್ರತ್ಯೇಕವಾಗಿ ಅಗತ್ಯ ದಾಖಲಾತಿಗಳೊಂದಿಗೆ ರೈತರ ಎಫ್ಐಡಿ (ಫಾರ್ಮರ್ಸ್ ಐಡೆಂಟಿಫಿಕೇಶನ್ ನಂಬರ್) ಯನ್ನು ಬಳಸಿಕೊಂಡು ಆನ್ಲೈನ್ ಮೂಲಕ 2026ರ ಆಗಸ್ಟ್ 31 ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.
ಈ ಹಿಂದೆ ಕೃಷಿ ಪ್ರಶಸ್ತಿ ಪಡೆದವರು ಮುಂದಿನ ಐದು ವರ್ಷಗಳ ಅವಧಿಗೆ ಆ ಹಂತದ ಬೆಳೆ ಸ್ಪರ್ಧೆಯ ಬಹುಮಾನಕ್ಕೆ ಅರ್ಹನಾಗಿರುವಿದಿಲ್ಲ. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ವಿವಿಧ ಸಮಿತಿ ತಂಡಗಳಲ್ಲಿ ಅಥವಾ ಕಾರ್ಯನಿರ್ವಹಿಸುತ್ತಿರುವ ಸದಸ್ಯರುಗಳು ಮತ್ತು ಅವರ ಕುಟುಂಬದ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಒಂದೇ ಕಟುಂಬದ ಎಲ್ಲಾ ಸದಸ್ಯರು (ಗಂಡ, ಹೆಂಡತಿ ಮತ್ತು ಅವಲಂಬಿತ ಮಕ್ಕಳು) ಭಾಗವಹಿಸುವಂತಿಲ್ಲ. ಒಬ್ಬರು ಮಾತ್ರ ಭಾಗವಹಿಸಬಹುದಾಗಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸೇವೆಯಲ್ಲಿರುವ ಯಾವುದೇ ಇಲಾಖೆ, ವಿಶ್ವವಿದ್ಯಾಲಯ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.
ಕೃಷಿ ಪ್ರಶಸ್ತಿ ಮಾರ್ಗಸೂಚಿಯ ಮಾನದಂಡಗಳ ಪ್ರಕಾರ ರಾಜ್ಯ, ಜಿಲ್ಲಾ ಅಥವಾ ತಾಲ್ಲೂಕು ಮಟ್ಟದ ಬೆಳೆ ಸ್ಪರ್ಧೆಗೆ ಅರ್ಹರಾಗಲು ಪುರುಷರ ವಿಭಾಗದಲ್ಲಿ ಕನಿಷ್ಟ 15 ಮತ್ತು ಮಹಿಳೆಯರ ವಿಭಾಗದಲ್ಲಿ ಕನಿಷ್ಟ 7 ಅರ್ಜಿಗಳ ನೋಂದಣಿ ಕಡ್ಡಾಯವಾಗಿರುತ್ತದೆ.
ಬೆಳೆ ಸ್ಪರ್ಧೆಗೆ ಆಯ್ಕೆಮಾಡಿರುವ ಬೆಳೆಗಳು: ಕೃಷಿ ಪ್ರಶಸ್ತಿ ಯೋಜನೆಯಡಿ ರಾಜ್ಯ ಮಟ್ಟದ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ಆಯ್ಕೆಮಾಡಿರುವ ಬೆಳೆಗಳು ವಿವರ ಇಂತಿದೆ. ಮುಂಗಾರು ಹಂಗಾಮಿನ ನೀರಾವರಿ ಮತ್ತು ಮಳೆಯಾಶ್ರಿತ ಭತ್ತ ಹಾಗೂ ಮಳೆಯಾಶ್ರಿತ ಬೆಳೆಗಳಾದ ಶೇಂಗಾ, ತೊಗರಿ ಪೂರ್ಣ ಬೆಳೆ, ಮುಸುಕಿನ ಜೋಳ, ನವಣೆ, ಸಜ್ಜೆ, ರಾಗಿ ಮತ್ತು ಸೋಯಾ ಅವರೆ, ಈ ಎಲ್ಲಾ ಬೆಳೆಗಳು ಒಳಗೊಂಡಿವೆ.
ಕೊಪ್ಪಳ ಜಿಲ್ಲೆಯ ಆಸಕ್ತ ರೈತ ಮತ್ತು ರೈತ ಮಹಿಳೆಯರು ಸದರಿ ಕಾರ್ಯಕ್ರಮದಡಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕೆಂದು ಈ ಮೂಲಕ ತಿಳಿಸಿದೆ. ಈ ಅವಕಾಶವನ್ನು ಜಿಲ್ಲೆಯ ಎಲ್ಲಾ ರೈತ ಬಾಂಧವರು ಸದುಪಯೋಗಪಡಿಸಿಕೊಳ್ಳಬೇಕೆಂದು ಈ ಮೂಲಕ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್