
ಗದಗ, 14 ಜುಲೈ (ಹಿ.ಸ.)
ಆ್ಯಂಕರ್:- ರಾಜ್ಯದಲ್ಲಿ ಮಳೆಯ ಕೊರತೆಯಿಂದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಲಭ್ಯತೆ ಸವಾಲಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ, ಕೆರೆ, ಜಲಾಶಯ ಹಾಗೂ ಡ್ಯಾಮ್ಗಳಲ್ಲಿ ಸಂಗ್ರಹವಾಗಿರುವ ನೀರನ್ನು ಕೇವಲ ಕುಡಿಯುವ ನೀರು ಮತ್ತು ಜನಜೀವನಕ್ಕೆ ಅಗತ್ಯವಾದ ದೈನಂದಿನ ಬಳಕೆಗಳಿಗೆ ಮಾತ್ರ ಮೀಸಲಿಡಬೇಕು.
ಕೃಷಿ, ಲಿಫ್ಟ್ ಇರಿಗೇಶನ್, ವಾಹನ ತೊಳೆಯುವುದು, ಕೈಗಾರಿಕಾ ಬಳಕೆ ಹಾಗೂ ಇತರೆ ಅನಿವಾರ್ಯವಲ್ಲದ ಉದ್ದೇಶಗಳಿಗೆ ಸಂಗ್ರಹಿತ ನೀರನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಬೆಂಗಳೂರಿನಿಂದ ವಿಡಿಯೋ ಸಂವಾದದ ಮೂಲಕ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಲಭ್ಯತೆ, ಜಲಾಶಯಗಳ ನೀರಿನ ಮಟ್ಟ, ನೀರಿನ ನಿರ್ವಹಣೆ ಹಾಗೂ ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಮಗ್ರ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಗೌರವ್ ಗುಪ್ತಾ, ರಾಜ್ಯ ಸರ್ಕಾರದ ಆದ್ಯತೆ ಸಾರ್ವಜನಿಕರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಕೆರೆ, ಡ್ಯಾಮ್ ಹಾಗೂ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಉದ್ದೇಶಕ್ಕೆ ಮೀಸಲಾದ ನೀರನ್ನು ಬೇರೆ ಉದ್ದೇಶಗಳಿಗೆ ಬಳಸಲು ಅವಕಾಶ ನೀಡಬಾರದು ಎಂದು ತಿಳಿಸಿದರು.
ಅಲ್ಲದೆ, ಕೆರೆ ಹಾಗೂ ಜಲಾಶಯಗಳಿಂದ ಅನಧಿಕೃತವಾಗಿ ನೀರು ಎತ್ತುತ್ತಿರುವ ಪಂಪ್ಸೆಟ್ಗಳನ್ನು ತಕ್ಷಣವೇ ತೆರವುಗೊಳಿಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿನ ಯಾವುದೇ ಭಾಗದಲ್ಲಿ ಲಿಫ್ಟ್ ಇರಿಗೇಶನ್ಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಬಾರದು. ಸರ್ಕಾರದ ಆದೇಶವನ್ನು ಎಲ್ಲ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ಕೆರೆ ತುಂಬಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಇಲಾಖೆಗಳು ನೀರಿನ ಬಳಕೆಯಲ್ಲಿ ಯಾವುದೇ ರೀತಿಯ ದುರುಪಯೋಗ ನಡೆಯದಂತೆ ನಿರಂತರ ನಿಗಾ ವಹಿಸಬೇಕು. ಸಂಗ್ರಹಿತ ನೀರನ್ನು ಅನಧಿಕೃತವಾಗಿ ಬೇರೆ ಉದ್ದೇಶಗಳಿಗೆ ಬಳಸುವುದನ್ನು ಸಂಪೂರ್ಣವಾಗಿ ತಡೆಗಟ್ಟುವ ಜವಾಬ್ದಾರಿ ಸಂಬಂಧಿತ ಅಧಿಕಾರಿಗಳ ಮೇಲಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉತ್ತಮ ಹಾಗೂ ನಿರಂತರ ಮಳೆಯಾದಲ್ಲಿ ನೀರಿನ ಸಂಗ್ರಹ ಪರಿಸ್ಥಿತಿಯನ್ನು ಮರುಪರಿಶೀಲಿಸಿ, ಅಗತ್ಯವಿದ್ದಲ್ಲಿ ಸರ್ಕಾರ ತನ್ನ ಆದೇಶವನ್ನು ಪರಿಷ್ಕರಿಸಲಿದೆ. ಆದರೆ ಅಷ್ಟರವರೆಗೆ ಈಗ ಜಾರಿಯಲ್ಲಿರುವ ಎಲ್ಲ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
ಸಾರ್ವಜನಿಕರು ಕೂಡ ನೀರಿನ ಸಂರಕ್ಷಣೆಯಲ್ಲಿ ಕೈಜೋಡಿಸಬೇಕು. ನೀರನ್ನು ಮಿತವಾಗಿ ಬಳಸುವುದು, ಮಳೆನೀರು ಸಂಗ್ರಹಕ್ಕೆ ಆದ್ಯತೆ ನೀಡುವುದು ಹಾಗೂ ನೀರಿನ ವ್ಯರ್ಥ ಬಳಕೆಯನ್ನು ತಪ್ಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕುಡಿಯುವ ನೀರಿನ ಸಂರಕ್ಷಣೆ ಸರ್ಕಾರದಷ್ಟೇ ಸಾರ್ವಜನಿಕರ ಸಹಕಾರದಿಂದ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ನೀರಿನ ದುರುಪಯೋಗ ಅಥವಾ ಸರ್ಕಾರದ ಆದೇಶ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಎಚ್ಚರಿಕೆ ನೀಡಲಾಯಿತು.
ಗದಗ ಜಿಲ್ಲಾಡಳಿತ ಭವನದಿಂದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ರಾಜ್ಯ ಸರ್ಕಾರ ಹೊರಡಿಸಿರುವ ಎಲ್ಲ ನಿರ್ದೇಶನಗಳನ್ನು ಸಂಬಂಧಿತ ಇಲಾಖೆಗಳು ಯಾವುದೇ ವಿನಾಯಿತಿ ಇಲ್ಲದೆ ಪಾಲಿಸಬೇಕು. ಜಿಲ್ಲೆಯ ಪ್ರತಿಯೊಂದು ಕೆರೆ ಹಾಗೂ ಜಲಾಶಯಗಳ ನೀರಿನ ಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಬೇಕು. ಅನಧಿಕೃತವಾಗಿ ನೀರು ಎತ್ತುವ ಚಟುವಟಿಕೆಗಳನ್ನು ತಕ್ಷಣ ತಡೆಯಬೇಕು ಹಾಗೂ ಗದಗ ಜಿಲ್ಲೆಯಲ್ಲಿ ಬೇಸಿಗೆಯವರೆಗೆ ಕುಡಿಯುವ ನೀರಿನ ಕೊರತೆ ಉಂಟಾಗದAತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಲಸಂಪನ್ಮೂಲ, ಸಣ್ಣ ನೀರಾವರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಕಂದಾಯ ಸೇರಿದಂತೆ ವಿವಿಧ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ಸರ್ಕಾರದ ನಿರ್ದೇಶನಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ಚರ್ಚಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP