
ಕೋಲಾರ, ೧೪ ಜುಲೈ (ಹಿ.ಸ):
ಆ್ಯಂಕರ್ : ಸಿಎಸ್ಆರ್ ನಿಧಿಯ ಮೂಲಕ ಶಾಲೆಗಳ ಅಭಿವೃದ್ದಿಗೆ ನೆರವಾಗುತ್ತಿರುವ ಪ್ರಕಾಶ್ ಬಸ್ ಕಾರ್ಪೋರೇಷನ್, ಎಸ್.ಎಂ.ಕಣ್ಣಪ್ಪ ಆಟೋಮೊಬೈಲ್ಸ್, ರೌಂಡ್ ಟೇಬಲ್ ಬರ್ಟ್-೧೪೦ ಸಂಸ್ಥೆಗಳ ಶೈಕ್ಷಣಿಕ ಕಾಳಜಿ ಶ್ಲಾಘನೀಯ ಎಂದು ಸೂಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ತಿಳಿಸಿದರು.
ಕೋಲಾರ ತಾಲ್ಲೂಕಿನ ಸೂಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸುಮಾರು ೨೪ ಲಕ್ಷ ವೆಚ್ಚದಲ್ಲಿ ಎರಡು ಪ್ರಾಯೋಗಾಲಯ ಕೊಠಡಿಗಳು, ಅಡುಗೆ ಮನೆ ನಿರ್ಮಾಣಕ್ಕೆ ಸದರಿ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ತಾವು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸದರಿ ಪ್ರಕಾಶ್ ಬಸ್ ಕಾರ್ಪೋರೇಷನ್ ಸಂಸ್ಥೆಗೆ ಸಿಎಸ್ಆರ್ ನಿಧಿಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮಾಡಿದ್ದ ಮನವಿಗೆ ಸ್ಪಂದಿಸಿ ಇದೀಗ ೨೪ ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲು ಮುಂದೆ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಗಳು ಇಂದು ಪೋಷಕರ ಕಾನ್ವೆಂಟ್ ವ್ಯಾಮೋಹಕ್ಕೆ ನಲುಗುತ್ತಿವೆ ಎಂದ ಅವರು, ದಾಖಲಾತಿ ಕೊರತೆ ಇಂದು ಶಾಲೆಗಳನ್ನು ಕಾಡುತ್ತಿದೆ, ಇದೀಗ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿಯಾಗಿ ಸರ್ಕಾರಿ ಶಾಲೆಗಳನ್ನು ಸಜ್ಜುಗೊಳಿಸುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ವಿವಿಧ ಕಂಪನಿಗಳ ಸಿಎಸ್ಆರ್ ನಿಧಿ ಸಹಕಾರಿಯಾಗಿದೆ ಎಂದರು.
ಪ್ರಕಾಶ್ ಬಸ್ ಕಾರ್ಪೋರೇಷನ್ ಸಂಸ್ಥೆಯ ವಾಣಿಜ್ಯ ವಿಭಾಗದ ನಿರ್ದೇಶಕ ಕೃಷ್ಣನ್ ಮಾತನಾಡಿ, ನಮ್ಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವೈಭವ್ ನರಂಗ್ ಅವರ ಮಾರ್ಗದರ್ಶನದಲ್ಲಿ ಸಿಎಸ್ಆರ್ ನಿಧಿಯನ್ನು ಶಾಲೆಗಳ ಅಭಿವೃದ್ದಿಗೆ ಬಳಸಲಾಗುತ್ತಿದೆ ಎಂದು ತಿಳಿಸಿ, ಶೈಕ್ಷಣಿಕ ಪ್ರಗತಿಗೆ ಇದು ನಮ್ಮ ಕೊಡುಗೆಯಾಗಿದೆ. ಪ್ರಕಾಶ್ ಬಸ್ ಕಾರ್ಪೋರೇಷನ್ ಹಣಕಾಸು ವಿಭಾಗದ ನಿರ್ದೇಶಕ ಪ್ರಸನ್ನ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಅನೇಕ ಉಚಿತ ಸೌಲಭ್ಯ ಸಿಗುತ್ತಿದೆ, ಇದೀಗ ವಿವಿಧ ಕಂಪನಿಗಳು ಶಾಲೆಗಳಿಗೆ ನೆರವಾಗಲು ಮುಂದೆ ಬರುತ್ತಿವೆ, ಇಂತಹ ಸಂದರ್ಭದಲ್ಲಿ ಮಕ್ಕಳು ಪರಿಶ್ರಮದಿಂದ ಗುರಿಸಾಧನೆಗೆ ಮುಂದಾಗಬೇಕು, ಶ್ರದ್ಧೆ,ಶಿಸ್ತು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ರೌಂಡ್ ಟೇಬಲ್ ಬರ್ಟ್-೧೪೦ ಸಂಸ್ಥೆಯ ಛರ್ಮನ್ ಸಲ್ಮಾನ್ ಮಾತನಾಡಿ, ನಮ್ಮದೊಂದು ಸ್ವಯಂಸೇವಾ ಸಂಸ್ಥೆಯಾಗಿದ್ದು, ಪ್ರಕಾಶ್ ಬಸ್ ಕಾರ್ಪೋರೇಷನ್, ಎಸ್.ಎಂ.ಕಣ್ಣಪ್ಪ ಆಟೋಮೊಬೈಲ್ಸ್, ಸಹಕಾರ ಬಳಸಿಕೊಂಡು ಸುಸಜ್ಜಿತ ಹಾಗೂ ಗುಣಮಟ್ಟದ ಕೊಠಡಿಗಳನ್ನು ನಿರ್ಮಿಸಿಕೊಡಲಾಗುವುದು. ವಿದ್ಯಾರ್ಥಿಗಳು ಮಕ್ಕಳು ಸರ್ಕಾರಿ ಶಾಲೆಯೆಂಬ ಕೀಳಿರಿಮೆ ತೊರೆಯಬೇಕು, ಅನೇಕ ಸಾಧಕರು ಈ ಶಾಲೆಗಳಲ್ಲೇ ಓದಿದವರು ಎಂಬ ಸತ್ಯ ಅರಿಯಬೇಕು ಎಂದ ಅವರು, ಶಿಕ್ಷಣದ ಜತೆಗೆ ಸಂಸ್ಕಾರ ಕಲಿಯಿರಿ ಎಂದು ಹೇಳಿದರು.
ಸೂಲೂರು ಗ್ರಾ.ಪಂ ಪಿಡಿಒ ಬಾಲಾಜಿ ಮಾತನಾಡಿ, ಸೂಲೂರು ಗ್ರಾಮ ಪಂಚಾಯಿತಿ ಜಿಲ್ಲೆಯಲ್ಲೇ ಅತಿ ಹೆಚ್ಚು ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಿದೆ, ಹಲವು ವರ್ಷಗಳ ಹಿಂದೆಯೇ ಶಾಲಾ ಮಕ್ಕಳಿಗೆ ವಾಹನ ಸೌಲಭ್ಯ ಒದಗಿಸಿದೆ ಎಂದು ತಿಳಿಸಿ, ಶಾಲಾ ಕಟ್ಟಡಗಳ ಕಾಮಗಾರಿ ಶೀಘ್ರ ಮುಗಿಸಿಕೊಡಿ, ಗುಣಮಟ್ಟದಿಂದಿರಲಿ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಪ್ರಕಾಶ್ ಬಸ್ ಕಾರ್ಪೋರೇಷನ್ ಉಪಾಧ್ಯಕ್ಷ ಚಂದ್ರಶೇಖರ್, ಶೈಕ್ಷಣಿಕ ಪ್ರಗತಿಗೆ ಮತ್ತಷ್ಟು ನೆರವಿನ ಭರವಸೆ ನೀಡಿ, ಮಕ್ಕಳು ಸೌಲಭ್ಯಗಳನ್ನು ಸುಪಯೋಗಪಡಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಹಣಕಾಸು ವಿಭಾಗದ ನಿರ್ದೇಶಕ ಪ್ರಸನ್ನ,ಎಸ್.ಎಂ.ಕಣ್ಣಪ್ಪ ಆಟೋಮೊಬೈಲ್ಸ್, ರೌಂಡ್ ಟೇಬಲ್ ಬರ್ಟ್-೧೪೦ ಸಂಸ್ಥೆ ಉಪಾಧ್ಯಕ್ಷ ಅಶ್ವಿನ್, ಸದಸ್ಯರಾದ ನಿಖಿಲ್, ವಿಶಾಲ್, ಧ್ರುವ್, ವಿರಾಜ್, ವಕೀಲ ಮುನಿರಾಜು, ಶಾಲೆ ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಮುಖ್ಯಶಿಕ್ಷಕ ಮುಕುಂದ್ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್