
ಸಾಂಬಾ, 14 ಜುಲೈ (ಹಿ.ಸ.):
ಆ್ಯಂಕರ್:
ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಚಕ್ ಸಲಾರಿಯಾ ಗ್ರಾಮದ ಸಮೀಪದ ಹೊಲದಲ್ಲಿ ಅನುಮಾನಾಸ್ಪದ ಡ್ರೋನ್ ಪತ್ತೆಯಾಗಿದೆ. ಸ್ಥಳೀಯ ರೈತರು ಬೆಳಿಗ್ಗೆ ಹೊಲದಲ್ಲಿ ಡ್ರೋನ್ ಕಂಡು ಕೂಡಲೇ ಸಮೀಪದ ಸೇನಾ ಘಟಕಕ್ಕೆ ಮಾಹಿತಿ ನೀಡಿದ್ದು, ಬಳಿಕ ಸೇನೆ ಡ್ರೋನ್ ಅನ್ನು ವಶಕ್ಕೆ ಪಡೆದಿದೆ.
ಡ್ರೋನ್ ಎಲ್ಲಿಂದ ಬಂದಿದೆ, ಅದರ ತಾಂತ್ರಿಕ ವೈಶಿಷ್ಟ್ಯಗಳೇನು ಹಾಗೂ ಗಡಿ ದಾಟಿದ ಚಟುವಟಿಕೆಗಳಿಗೆ ಇದನ್ನು ಬಳಸಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಅದನ್ನು ವಿಧಿ ವಿಜ್ಞಾನ (ಫೊರೆನ್ಸಿಕ್) ಪರೀಕ್ಷೆಗೆ ಕಳುಹಿಸಲಾಗಿದೆ.
ಇದಕ್ಕೂ ಮುನ್ನ ಸೋಮವಾರ ರಾತ್ರಿ ನಂದಪುರ ಗ್ರಾಮದ ಸಮೀಪ ಅರ್ನಿಯಾ ಭಾಗದಿಂದ ಬರುತ್ತಿದ್ದ ಅನುಮಾನಾಸ್ಪದ ಹಾರುವ ವಸ್ತುವನ್ನು ಸೇನೆ ಗುರುತಿಸಿತ್ತು. ಅದು ಡ್ರೋನ್ ಆಗಿರಬಹುದೆಂಬ ಶಂಕೆಯಿಂದ ತಕ್ಷಣವೇ ಸೇನೆಯು ಡ್ರೋನ್-ನಿರೋಧಕ ವ್ಯವಸ್ಥೆಯನ್ನು ಸಕ್ರಿಯಗೊಳಿಸಿ ಜಾಮಿಂಗ್ ಕಾರ್ಯಾಚರಣೆ ನಡೆಸಿತ್ತು. ಜಾಮಿಂಗ್ ಬಳಿಕ ಕೆಳಗೆ ಬಿದ್ದಿದ್ದು ಇದೇ ಡ್ರೋನ್ ಆಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.