ಕೋಲಾರದಲ್ಲಿ ಮತದಾರರ ವಿಶೇಷ ಪರಿಷ್ಕರಣೆ ಪರಿಶೀಲಿಸಿದ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ
ಕೋಲಾರದಲ್ಲಿ ಮತದಾರರ ವಿಶೇಷ ಪರಿಷ್ಕರಣೆ ಪರಿಶೀಲಿಸಿದ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ
ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬು ಕುಮಾರ್ ಮಂಗಳವಾರ ಕೋಲಾರ ನಗರದ ಕೀಲುಕೋಟೆ ಮತಗಟ್ಟೆಗೆ ಭೇಟಿ ನೀಡಿ ವಿಶೇಷ ಮತದಾರರ ಪರಿಷ್ಕರಣೆ ವೀಕ್ಷಿಸಿದರು.


ಕೋಲಾರ, ಜುಲೈ ೧೪(ಹಿ.ಸ):

ಆ್ಯಂಕರ್ : ದೋಷರಹಿತ ಹಾಗೂ ಗುಣಮಟ್ಟದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಾದ ವಿ. ಅನ್ಬುಕುಮಾರ್ ಮಂಗಳವಾರ ಕೋಲಾರ ಜಿಲ್ಲೆಗೆ ಭೇಟಿ ನೀಡಿ, ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಚುನಾವಣಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಲು ಅಧಿಕಾರಿಗಳಿಗೆ ಸ್ಪಷ್ಟ ಮಾರ್ಗದರ್ಶನ ನೀಡಿದರು

ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಹಾಲ್ನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು ಮ್ಯಾಪಿಂಗ್ ಕಾರ್ಯದ ಮಹತ್ವವನ್ನು ವಿವರಿಸಿದರು. ಜಿಲ್ಲೆಯಲ್ಲಿ ಮ್ಯಾಪಿಂಗ್ ಕಾರ್ಯವು ಅತ್ಯುತ್ತಮವಾಗಿ ನಡೆದಿದ್ದು, ಇದರಿಂದಾಗಿ ನಿಮಗೆ ಎಸ್ಐಆರ್ ಪ್ರಕ್ರಿಯೆ ಮಾಡಲು ಬಹಳ ಅನುಕೂಲವಾಗಿದೆ. ಮ್ಯಾಪಿಂಗ್ ಅನ್ನು ಸರಿಯಾಗಿ ಮಾಡಿದ್ದರಿಂದ ಮುಂದಾಗುವ ದೊಡ್ಡ ಗೊಂದಲಗಳು ಹಾಗೂ ತಲೆನೋವು ತಪ್ಪಿದಂತಾಗಿದೆ ಎಂದು ಅಧಿಕಾರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಶೇ ೧೦೦% ಈ ಎಫ್ ಫಾರ್ಮ್ ವಿತರಣೆ ಹಾಗೂ ವಾಪಸ್ ಬಂದಫಾರ್ಮ್ಗಳಲ್ಲಿ ೪೨% ಡಿಜಿಟಲೀಕರಣ ಮಾಡಿರುವ ಕುರಿತು ಅವರು ಶ್ಲಾಘನೆ ವ್ಯಕ್ತಪಡಿಸಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ವಿಶ್ವಾಸಗಳಿಸುವ ಹಾಗೂ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳುವ ಕುರಿತು ಅವರು ವಿಶೇಷ ಒತ್ತು ನೀಡಿದರು. ಎಲ್ಲಾ ನೊಂದಾಯಿತ ರಾಜಕೀಯ ಪಕ್ಷಗಳ ತಾಲೂಕು ಮಟ್ಟದ ಪದಾಧಿಕಾರಿಗಳಿಗೆ ಮತದಾರರ ಪಟ್ಟಿ ಪರಿಷ್ಕರಣೆಯ ದೈನಂದಿನ ಪ್ರಗತಿಯನ್ನು ಕಡ್ಡಾಯವಾಗಿ ಲಿಖಿತ ರೂಪದಲ್ಲಿಯೇ ತಿಳಿಸಬೇಕು. ಕೇವಲ ವಾಟ್ಸಾಪ್ ಅಥವಾ ಇಮೇಲ್ ಮೂಲಕ ಮಾಹಿತಿ ನೀಡಿದರೆ ಅದು ಅಧಿಕೃತ ಸಂವಹನವಾಗುವುದಿಲ್ಲ. ನಾಳೆ ಯಾವುದೇ ರಾಜಕೀಯ ಪಕ್ಷದವರು ಬಂದು ನಮಗೆ ಮಾಹಿತಿ ನೀಡಿಲ್ಲ ಎಂದು ಆಕ್ಷೇಪಿಸಿದರೆ, ನಮ್ಮ ಬಳಿ ಅಧಿಕೃತ ದಾಖಲೆ ಇರಬೇಕು ಎಂದು ಪಾರದರ್ಶಕತೆಯ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮತದಾರರ ಪಟ್ಟಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಬಗ್ಗೆ ಮಾತನಾಡಿದ ಅವರು, ಮೃತಪಟ್ಟ, ಖಾಯಂ ಆಗಿ ಸ್ಥಳಾಂತರಗೊAಡ ಹಾಗೂ ದ್ವಿಗುಣಗೊಂಡಿರುವ ಮತದಾರರ ವಿವರಗಳನ್ನು ಅತ್ಯಂತ ಎಚ್ಚರಿಕೆಯಿಂದ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಿದರು. ಪ್ರಗತಿಯಲ್ಲಿ ತುಸು ಹಿಂದುಳಿದಿರುವ ಮತಗಟ್ಟೆಗಳ ಬಗ್ಗೆ ಗಮನಹರಿಸುವಂತೆ ಕಿವಿಮಾತು ಹೇಳಿದ ಅವರು, ಯಾವ ಮತಗಟ್ಟೆಗಳಲ್ಲಿ ಶೇ. ೫೦ಕ್ಕಿಂತ ಕಡಿಮೆ ಪ್ರಗತಿ ಇದೆಯೋ ಮತ್ತು ಯಾರು ಸರಾಸರಿಗಿಂತ ಕಡಿಮೆ ಸಾಧನೆ ಮಾಡಿದ್ದಾರೋ, ಅಂತಹ ಪ್ರದೇಶಗಳ ಕಡೆಗೆ ಹೆಚ್ಚಿನ ಆದ್ಯತೆ ನೀಡಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರಗತಿ ಸಾಧಿಸಬೇಕು ಎಂದು ಉತ್ತೇಜನ ನೀಡಿದರು.

ಈ ಸಭೆಗೂ ಮುನ್ನ ಮುಖ್ಯ ಚುನಾವಣಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ರಂಗೋಲಿ ಪ್ರದರ್ಶನದ ಮೂಲಕ ಏರ್ಪಡಿಸಲಾಗಿದ್ದ 'ಸ್ವೀಪ್' ಜಾಗೃತಿ ಕಾರ್ಯಕ್ರಮವನ್ನು ವೀಕ್ಷಿಸಿದರು. ಸಭೆಯ ಬಳಿಕ ಕ್ಷೇತ್ರ ಮಟ್ಟದ ವಾಸ್ತವಿಕ ಸ್ಥಿತಿಗತಿಗಳನ್ನು ಖುದ್ದಾಗಿ ಅರಿಯಲು ಅವರು ನಗರದ ಕೀಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ 'ಮತಗಟ್ಟೆಗೆ ಭೇಟಿ ನೀಡಿದರು. ತದನಂತರ ಚೊಕ್ಕಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿರುವ 'ಮತಗಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಎಸ್ ಎಂ ಮಂಗಳ, ಉಪವಿಭಾಗಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ಎಲ್ಲಾ ತಾಲ್ಲೂಕು ಈಆರ್ಓ, ಎಲ್ಲಾ ಎಈಆರ್ಓ, ಎಲ್ಲಾ ನೋಡಲ್ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande