ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ನೇತೃತ್ವದ ಎಐ ವಿಶ್ವವಿದ್ಯಾಲಯ ಸ್ಥಾಪನೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು, 14 ಜುಲೈ (ಹಿ.ಸ.): ಆ್ಯಂಕರ್: ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (ಬಿಐಇಸಿ)ಯಲ್ಲಿ ನಡೆದ ಗೂಗಲ್ ಐ/ಒ ಕನೆಕ್ಟ್ ಇಂಡಿಯಾ–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕವನ್ನು ಭಾರತದ ಕೃತಕ ಬುದ್ಧಿಮತ್ತೆ (ಎಐ) ರಾಜಧಾನಿಯನ್ನಾಗಿಸುವ
ಬೆಂಗಳೂರಿನಲ್ಲಿ ಗೂಗಲ್ ಐ/ಒ ಕನೆಕ್ಟ್ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಡಿಕೆಶಿ


ಬೆಂಗಳೂರು, 14 ಜುಲೈ (ಹಿ.ಸ.):

ಆ್ಯಂಕರ್:

ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (ಬಿಐಇಸಿ)ಯಲ್ಲಿ ನಡೆದ ಗೂಗಲ್ ಐ/ಒ ಕನೆಕ್ಟ್ ಇಂಡಿಯಾ–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕವನ್ನು ಭಾರತದ ಕೃತಕ ಬುದ್ಧಿಮತ್ತೆ (ಎಐ) ರಾಜಧಾನಿಯನ್ನಾಗಿಸುವ ದೃಢ ಸಂಕಲ್ಪವನ್ನು ವ್ಯಕ್ತಪಡಿಸಿದರು.

ವಿಶ್ವದ ಅಗ್ರ ಐದು ಕೃತಕ ಬುದ್ಧಿಮತ್ತೆ ನಗರಗಳಲ್ಲಿ ಒಂದಾಗಿ ಬೆಂಗಳೂರು ಹೊರಹೊಮ್ಮಿರುವುದು ಹಾಗೂ ಭಾರತದ ಸುಮಾರು ಶೇ.40ರಷ್ಟು ಯುನಿಕಾರ್ನ್ ನವೋದ್ಯಮಗಳಿಗೆ ಕರ್ನಾಟಕ ನೆಲೆಯಾಗಿರುವುದು ರಾಜ್ಯದ ಪ್ರತಿಭೆ, ನವೋದ್ಯಮ ಪರಿಸರ ಮತ್ತು ಉದ್ಯಮಶೀಲತೆಯ ಪ್ರತೀಕವಾಗಿದೆ ಎಂದು ಅವರು ಹೇಳಿದರು.

ಈ ಸಾಧನೆಗಳಲ್ಲೇ ತೃಪ್ತಿಪಡದೆ, ಕರ್ನಾಟಕವನ್ನು ದೇಶದ ಎಐ ರಾಜಧಾನಿಯನ್ನಾಗಿಸಲು ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸುತ್ತಿದೆ. ಇದರ ಭಾಗವಾಗಿ ದೇಶದ ಮೊದಲ ಸರ್ಕಾರಿ ನೇತೃತ್ವದ ಎಐ ವಿಶ್ವವಿದ್ಯಾಲಯ ಮತ್ತು ಎಐ ನವೋದ್ಯಮ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಶಾಲಾ ಹಂತದಿಂದಲೇ ಎಐ ಶಿಕ್ಷಣ ಪರಿಚಯಿಸುವುದರ ಜೊತೆಗೆ, ಕರ್ನಾಟಕದ ಕರಾವಳಿ ಭಾಗ ಹಾಗೂ ಬೆಂಗಳೂರಿನ ಸಮೀಪ ಮುಂದಿನ ತಲೆಮಾರಿನ ಹಸಿರು ದತ್ತಾಂಶ ಕೇಂದ್ರಗಳನ್ನು ನಿರ್ಮಿಸಿ ಎಐ ಆರ್ಥಿಕತೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

‘ಬೆಂಗಳೂರು ಮೀರಿ’ ಪರಿಕಲ್ಪನೆಯಡಿ ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಶ್ವಮಟ್ಟದ ತಂತ್ರಜ್ಞಾನ ಕೇಂದ್ರಗಳನ್ನು ಅಭಿವೃದ್ಧಿಪಡಿಸಿ, ರಾಜ್ಯದ ಪ್ರತಿಯೊಂದು ಭಾಗದ ಯುವ ಪ್ರತಿಭೆಗಳಿಗೆ ಜಾಗತಿಕ ಅವಕಾಶಗಳನ್ನು ತಲುಪಿಸುವ ಗುರಿ ಹೊಂದಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ತಂತ್ರಜ್ಞಾನವು ಮಾನವೀಯತೆಯನ್ನು ಬದಲಿಸುವುದಲ್ಲ, ಜನರ ಜೀವನವನ್ನು ಉತ್ತಮಗೊಳಿಸುವ ಸಾಧನವಾಗಬೇಕು ಎಂಬುದು ಸರ್ಕಾರದ ನಿಲುವಾಗಿದೆ. ರೈತರಿಗೆ ಕನ್ನಡದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಕೃಷಿ ಸಲಹೆ, ಗ್ರಾಮೀಣ ಆರೋಗ್ಯ ಸೇವೆಗಳ ಬಲವರ್ಧನೆ ಹಾಗೂ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಎಐ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಇದಲ್ಲದೆ, 'ಸರ್ಕಾರವೇ ಮೊದಲ ಗ್ರಾಹಕ' ಎಂಬ ನೀತಿಯಡಿ ನವೋದ್ಯಮಗಳು ರೂಪಿಸುವ ಹೊಸ ತಂತ್ರಜ್ಞಾನ ಪರಿಹಾರಗಳನ್ನು ಸರ್ಕಾರವೇ ಮೊದಲು ಅಳವಡಿಸಿಕೊಂಡು, ಅವುಗಳನ್ನು ಪರೀಕ್ಷಿಸಿ ವಿಸ್ತರಿಸಲು ನೆರವಾಗಲಿದೆ. ನಾವೀನ್ಯತೆ, ಸಮಗ್ರತೆ ಮತ್ತು ದೂರದೃಷ್ಟಿಯೊಂದಿಗೆ ಕರ್ನಾಟಕ ಮುಂದೆಯೂ ದೇಶಕ್ಕೆ ಮಾದರಿಯಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande