
ನವದೆಹಲಿ, 14 ಜುಲೈ (ಹಿ.ಸ.):
ಆ್ಯಂಕರ್:
ಹೋರ್ಮುಜ್ ಜಲಸಂಧಿ ಮೂಲಕ ಸಂಚರಿಸುತ್ತಿದ್ದ ಎಂಟಿ ಅಲ್ ಬಹಿಯಾ ಮತ್ತು ಎಂಟಿ ಮೊಂಬಾಸಾ ಹಡಗುಗಳ ಮೇಲೆ ನಡೆದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಯ ಉಪ ಮಿಷನ್ ಮುಖ್ಯಸ್ಥರನ್ನು ವಿದೇಶಾಂಗ ಸಚಿವಾಲಯ ಕರೆಸಿ ಅಧಿಕೃತ ಪ್ರತಿಭಟನೆ ದಾಖಲಿಸಿದೆ.
ಹೋರ್ಮುಜ್‌ನಂತಹ ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಸುರಕ್ಷಿತ ಹಾಗೂ ಅಡೆತಡೆರಹಿತ ನೌಕಾಯಾನಕ್ಕೆ ಧಕ್ಕೆಯಾಗುವ ಯಾವುದೇ ಕೃತ್ಯವನ್ನು ಭಾರತ ಖಂಡಿಸಿದ್ದು, ಪಶ್ಚಿಮ ಏಷ್ಯಾದಲ್ಲಿ ಹಿಂಸಾಚಾರವನ್ನು ತಕ್ಷಣ ನಿಲ್ಲಿಸಿ ಸಂವಾದ ಮತ್ತು ರಾಜತಾಂತ್ರಿಕ ಮಾರ್ಗಕ್ಕೆ ಮರಳುವಂತೆ ಕರೆ ನೀಡಿದೆ.
ದಾಳಿಗೆ ಒಳಗಾದ ಎರಡೂ ಹಡಗುಗಳಲ್ಲಿ ಒಟ್ಟು 46 ಸಿಬ್ಬಂದಿಯಿದ್ದು, ಅವರಲ್ಲಿ 30 ಮಂದಿ ಭಾರತೀಯ ನಾವಿಕರಾಗಿದ್ದಾರೆ. ಎಂಟಿ ಅಲ್ ಬಹಿಯಾ ಹಡಗಿನಲ್ಲಿ ಇದ್ದ 12 ಭಾರತೀಯರಲ್ಲಿ ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಎಂಟಿ ಮೊಂಬಾಸಾ ಹಡಗಿನಲ್ಲಿ ಇದ್ದ 18 ಭಾರತೀಯರಲ್ಲಿ 9 ಮಂದಿ ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಮೃತ ಭಾರತೀಯ ನಾವಿಕರ ಕುಟುಂಬಕ್ಕೆ ಕೇಂದ್ರ ಸರ್ಕಾರ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದೆ. ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದು, ಗಾಯಾಳು ಭಾರತೀಯರಿಗೆ ಅಗತ್ಯ ನೆರವು ಒದಗಿಸಲು ಅಲ್ಲಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ ಎಂದು ಪ್ರಕಟಣೆ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.