
ಬಾಗಲಕೋಟೆ, 14 ಜುಲೈ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬಾದಾಮಿ ನಗರದ ಅಯ್ಯಂಗಾರ್ ಬೇಕರಿಯಲ್ಲಿ ಮಾರಾಟವಾಗಿದ್ದ ಹುಟ್ಟುಹಬ್ಬದ ಕೇಕ್ನಲ್ಲಿ ಫಂಗಸ್ ಕಂಡುಬಂದಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ತುರ್ತು ದಾಳಿ ನಡೆಸಿ ಸಮಗ್ರ ಪರಿಶೀಲನೆ ಕೈಗೊಂಡರು. ಈ ವೇಳೆ ವಿವಿಧ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಿದ್ದು, ವರದಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರಿಂದ ಬಂದ ದೂರುವನ್ನು ಗಂಭೀರವಾಗಿ ಪರಿಗಣಿಸಿದ ಆಹಾರ ಸುರಕ್ಷತಾ ಇಲಾಖೆ, ಆಹಾರ ಸುರಕ್ಷತಾ ಅಧಿಕಾರಿ ಇಸಾಕ್ ಫಾರೂಕಿ ಹಾಗೂ ಆಹಾರ ಸುರಕ್ಷತಾ ಅಧಿಕಾರಿ ಕೆ.ಎಂ. ಸಾಳಗುಂದಿ ನೇತೃತ್ವದಲ್ಲಿ ಅಯ್ಯಂಗಾರ್ ಬೇಕರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪರಿಶೀಲನೆಯ ವೇಳೆ ಬೇಕರಿಯ ಸ್ವಚ್ಛತೆ, ಆಹಾರ ತಯಾರಿಕೆ ಮತ್ತು ಸಂಗ್ರಹಣೆ ವಿಧಾನ, ಬಳಸಲಾಗುತ್ತಿರುವ ಕಚ್ಚಾ ವಸ್ತುಗಳ ಗುಣಮಟ್ಟ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ಹುಟ್ಟುಹಬ್ಬದ ಕೇಕ್, ವಿವಿಧ ಸಿಹಿ ಪದಾರ್ಥಗಳು, ದಾಲ್ಡಾ, ಮೈದಾ, ಸಕ್ಕರೆ, ಅಡುಗೆ ಎಣ್ಣೆ ಸೇರಿದಂತೆ ಹಲವು ಆಹಾರ ವಸ್ತುಗಳ ಮಾದರಿಗಳನ್ನು ನಿಯಮಾನುಸಾರ ಸಂಗ್ರಹಿಸಿ ಹೆಚ್ಚಿನ ವೈಜ್ಞಾನಿಕ ಪರೀಕ್ಷೆಗಾಗಿ ಬೆಳಗಾವಿಯ ತಿಲಕವಾಡಿಯಲ್ಲಿರುವ ಮಾನ್ಯ ಮುಖ್ಯ ಆಹಾರ ವಿಶ್ಲೇಷಕರ ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅಧಿಕಾರಿಗಳು, ಪ್ರಯೋಗಾಲಯದ ವರದಿಯಲ್ಲಿ ಆಹಾರ ಪದಾರ್ಥಗಳು ಗುಣಮಟ್ಟವಿಲ್ಲದವು ಅಥವಾ ಮಾನವ ಆರೋಗ್ಯಕ್ಕೆ ಹಾನಿಕಾರಕವಾಗಿವೆ ಎಂದು ದೃಢಪಟ್ಟಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅನ್ವಯ ಅಯ್ಯಂಗಾರ್ ಬೇಕರಿ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ವರದಿ ಬರುವವರೆಗೆ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆಹಾರ ಸುರಕ್ಷತೆ ಕುರಿತಂತೆ ಸಾರ್ವಜನಿಕರು ಯಾವುದೇ ಅನುಮಾನಾಸ್ಪದ ಅಥವಾ ಗುಣಮಟ್ಟವಿಲ್ಲದ ಆಹಾರ ಪದಾರ್ಥಗಳು ಕಂಡುಬಂದಲ್ಲಿ ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದರು.
ಪರಿಶೀಲನೆ ಸಂದರ್ಭದಲ್ಲಿ ಅಯ್ಯಂಗಾರ್ ಬೇಕರಿ ಮಾಲೀಕರಾದ ಮುತ್ತನಗೌಡ ಪಾಟೀಲ, ಮಲಕರೆಡ್ಡಿ, ಮುಂಡಗೌಡ, ಸಾಮಾಜಿಕ ಹೋರಾಟಗಾರ ಶ್ರೀ ಹುಲ್ಲಪ್ಪ ಮೂವಿ ಹಾಗೂ ಬಾದಾಮಿಯ ಗಣ್ಯ ವ್ಯಾಪಾರಸ್ಥರಾದ ರುದ್ರಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande