ಜೆಸ್ಕಾಂ : ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಒಸಿ ಸಲ್ಲಿಕೆಗೆ ಆ. 15ರ ವರೆಗೆ ವಿನಾಯಿತಿ
ಬಳ್ಳಾರಿ, 14 ಜುಲೈ (ಹಿ.ಸ.) ಆ್ಯಂಕರ್ : ರಾಜ್ಯ ಸರ್ಕಾರವು 2026ರ ಮೇ 31ರಂದು ಅಥವಾ ಅದಕ್ಕೂ ಮುಂಚಿತವಾಗಿ ನಿರ್ಮಾಣ ಪೂರ್ಣಗೊಂಡಿರುವ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ, ಸ್ವಾಧೀನಾನುಭವ ಪ್ರಮಾಣಪತ್ರ ನೀಡಿ ಆದೇಶ ಹೊರಡಿಸಿದೆ. ಈ ಅವಕಾಶದ ಸದುಪಯೋಗವನ್ನು ಗ್ರಾಹಕರು
ಜೆಸ್ಕಾಂ : ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಒಸಿ ಸಲ್ಲಿಕೆಗೆ ಆ. 15ರ ವರೆಗೆ ವಿನಾಯಿತಿ


ಬಳ್ಳಾರಿ, 14 ಜುಲೈ (ಹಿ.ಸ.)

ಆ್ಯಂಕರ್ : ರಾಜ್ಯ ಸರ್ಕಾರವು 2026ರ ಮೇ 31ರಂದು ಅಥವಾ ಅದಕ್ಕೂ ಮುಂಚಿತವಾಗಿ ನಿರ್ಮಾಣ ಪೂರ್ಣಗೊಂಡಿರುವ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ, ಸ್ವಾಧೀನಾನುಭವ ಪ್ರಮಾಣಪತ್ರ ನೀಡಿ ಆದೇಶ ಹೊರಡಿಸಿದೆ. ಈ ಅವಕಾಶದ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಜೆಸ್ಕಾಂ ತಿಳಿಸಿದೆ.

ಜೆಸ್ಕಾಂ ವ್ಯಾಪ್ತಿಯ ಕಲಬುರಗಿ, ಬಳ್ಳಾರಿ, ರಾಯಚೂರು, ಯಾದಗಿರಿ, ಬೀದರ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2,400 ಚದರ ಅಡಿಗಳವರೆಗೆ (ಶೇ. 20ರ ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ) ಅಳತೆಯ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ಜಿ+3 ಅಂತಸ್ತಿನ ವಸತಿ ಕಟ್ಟಡಗಳು ಅಥವಾ ಸ್ಟಿಲ್ಟ್ ಪಾರ್ಕಿಂಗ್ + 4 ಮಹಡಿಗಳನ್ನು ಹೊಂದಿರುವ ವಸತಿ ಕಟ್ಟಡಗಳಿಗೆ, 2026ರ ಮೇ 31ರೊಳಗೆ ನಿರ್ಮಾಣ ಪೂರ್ಣಗೊಂಡಿದ್ದಲ್ಲಿ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಸಲ್ಲಿಕೆಯಿಂದ ಒಂದು ಬಾರಿಯ ವಿನಾಯಿತಿ ನೀಡಲಾಗಿದೆ.

ಈ ಆದೇಶವು 2026ರ ಮೇ 31ರೊಳಗೆ ನಿರ್ಮಾಣ ಪೂರ್ಣಗೊಂಡಿರುವ ಕೆಳಕಂಡ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ:

1. ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ವಸತಿ ಕಟ್ಟಡಗಳು.

2. ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿದ್ದು, ಇನ್ನೂ ಶಾಶ್ವತ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸದಿರುವ ವಸತಿ ಕಟ್ಟಡಗಳು.

3. ಯಾವುದೇ ರೀತಿಯ (ತಾತ್ಕಾಲಿಕ ಅಥವಾ ಶಾಶ್ವತ) ವಿದ್ಯುತ್ ಸಂಪರ್ಕಕ್ಕಾಗಿ ಇನ್ನೂ ಅರ್ಜಿ ಸಲ್ಲಿಸದಿರುವ ವಸತಿ ಕಟ್ಟಡಗಳು.

ಇದಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿರುವ ರೈತರು ವಾಸಿಸುವ ಮನೆಗಳು, ತೋಟದ ಮನೆಗಳು, ಕೃಷಿ ಉಪಕರಣಗಳನ್ನು ಸಂಗ್ರಹಿಸುವ ಕೊಠಡಿಗಳು, ದನದ ಕೊಟ್ಟಿಗೆಗಳು, ರೇಷ್ಮೆ ಗೂಡಿನ ಮನೆಗಳು, ಕೋಳಿ ಸಾಕಾಣಿಕೆ ಕೇಂದ್ರಗಳು ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೂ ಸಹ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಸಲ್ಲಿಸುವುದರಿಂದಲೂ ವಿನಾಯಿತಿ ನೀಡಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande