
ಶಿವಮೊಗ್ಗ, 14 ಜುಲೈ (ಹಿ.ಸ.):
ಆ್ಯಂಕರ್:ದೇಶದ ಗಡಿಯನ್ನು ಕಾಯುವ ಸೈನಿಕರಷ್ಟೇ ದೇಶದ ಒಳಗಿನ ಅರಣ್ಯ ಸಂಪತ್ತನ್ನು ರಕ್ಷಿಸಲು ಪ್ರತಿಯೊಬ್ಬ ನಾಗರಿಕರೂ ಊರೊಳಗಿನ ಸೈನಿಕರಾಗಬೇಕು ಎಂದು ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ ಜಿ.ಎ. ಕರೆ ನೀಡಿದರು.
ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಅರಣ್ಯೀಕರಣ ಮತ್ತು ಕೆರೆಗಳ ಪುನಶ್ಚೇತನ ಅಭಿಯಾನ–2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಸಮತೋಲನ ಕಾಪಾಡಲು ಅರಣ್ಯ ಮತ್ತು ಜಲಮೂಲಗಳ ಸಂರಕ್ಷಣೆ ಅತ್ಯಗತ್ಯ ಎಂದರು. ಶುದ್ಧ ಗಾಳಿ, ನೀರು ಮತ್ತು ಉತ್ತಮ ಪರಿಸರಕ್ಕಾಗಿ ಪ್ರತಿಯೊಬ್ಬರೂ ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರಮಾಣದಲ್ಲಿ ಸಸಿ ನೆಡುವ ಅಭಿಯಾನ ನಡೆಯುತ್ತಿದ್ದು, ನೆಟ್ಟ ಸಸಿಗಳನ್ನು ಐದು ವರ್ಷಗಳ ಕಾಲ ಪೋಷಿಸಿ ಮರಗಳನ್ನಾಗಿ ಬೆಳೆಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಟಿ. ಹನುಮಂತಪ್ಪ ಮಾತನಾಡಿ, ಕೆರೆಗಳ ಸಂರಕ್ಷಣೆ ಮತ್ತು ಹಸಿರೀಕರಣ ಇಂದಿನ ಅಗತ್ಯವಾಗಿದ್ದು, ಪರಿಸರ ಸಂರಕ್ಷಣೆಯ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರು, ಅರಣ್ಯ ಇಲಾಖೆ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಸಿ ನೆಡುವ ಮೂಲಕ ಹಸಿರು ಅಭಿಯಾನಕ್ಕೆ ಚಾಲನೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.