
ಬಾಗಲಕೋಟೆ, 14 ಜುಲೈ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ್ ಹದ್ಲಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರನ್ನು ಭೇಟಿ ಮಾಡಿದ್ದಾರೆ ಎಂಬ ಆರೋಪದ ಕುರಿತು ಪಕ್ಷದ ಮಟ್ಟದಲ್ಲಿ ದೂರು ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಕಾರಣ ಕೇಳುವ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಕೆಲವು ಮುಖಂಡರು ಹಾಗೂ ಕಾರ್ಯಕರ್ತರಿಂದ ಈ ಕುರಿತು ಲಿಖಿತ ದೂರು ಸಲ್ಲಿಕೆಯಾಗಿದ್ದು, ದೂರಿನ ಗಂಭೀರತೆಯನ್ನು ಪರಿಗಣಿಸಿ ಪಕ್ಷದ ಶಿಸ್ತು ಸಮಿತಿಯ ನಿಯಮಾನುಸಾರ ನಾಗರಾಜ್ ಹದ್ಲಿ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.
ನೋಟಿಸ್ಗೆ ಅವರು ನೀಡುವ ಉತ್ತರ ಹಾಗೂ ಲಭ್ಯವಾಗುವ ಮಾಹಿತಿಯ ಆಧಾರದ ಮೇಲೆ ಸಂಪೂರ್ಣ ವಿಚಾರಣೆ ನಡೆಸಲಾಗುವುದು. ವಿಚಾರಣೆಯ ಬಳಿಕ ವಾಸ್ತವಾಂಶಗಳನ್ನು ಒಳಗೊಂಡ ವರದಿಯನ್ನು ರಾಜ್ಯ ಕಾಂಗ್ರೆಸ್ ವರಿಷ್ಠರಿಗೆ ಸಲ್ಲಿಸಲಾಗುವುದು. ಅಂತಿಮ ನಿರ್ಧಾರವನ್ನು ಪಕ್ಷದ ಉನ್ನತ ನಾಯಕತ್ವವೇ ಕೈಗೊಳ್ಳಲಿದೆ ಎಂದು ನಂಜಯ್ಯನಮಠ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಸಂಘಟನಾ ಶಿಸ್ತು ಹಾಗೂ ಪಕ್ಷದ ಮೌಲ್ಯಗಳಿಗೆ ವಿರುದ್ಧವಾಗಿ ಯಾವುದೇ ಚಟುವಟಿಕೆ ನಡೆದಿರುವ ಬಗ್ಗೆ ದೂರು ಬಂದರೆ ಅದನ್ನು ಗಂಭೀರವಾಗಿ ಪರಿಗಣಿಸುವುದು ಪಕ್ಷದ ಜವಾಬ್ದಾರಿಯಾಗಿದೆ. ಯಾರೇ ಆಗಿದ್ದರೂ ಪಕ್ಷದ ನಿಯಮಗಳಿಗೆ ಒಳಪಟ್ಟೇ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಈ ಪ್ರಕರಣದ ಕುರಿತು ಯಾವುದೇ ಪೂರ್ವಾಗ್ರಹ ಹೊಂದಿಲ್ಲ. ನೋಟಿಸ್ ನೀಡಿರುವುದು ಕೇವಲ ದೂರು ಹಿನ್ನೆಲೆಯಲ್ಲಿ ವಿವರಣೆ ಪಡೆಯುವ ಉದ್ದೇಶದಿಂದ ಮಾತ್ರ. ವಿಚಾರಣೆ ಪೂರ್ಣಗೊಂಡ ನಂತರವೇ ಸತ್ಯಾಸತ್ಯತೆ ತಿಳಿಯಲಿದ್ದು, ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪಕ್ಷದ ಆಂತರಿಕ ಶಿಸ್ತು ಕಾಪಾಡುವುದು ಹಾಗೂ ಕಾರ್ಯಕರ್ತರಲ್ಲಿ ವಿಶ್ವಾಸ ಉಳಿಸುವ ದೃಷ್ಟಿಯಿಂದ ಪಾರದರ್ಶಕ ರೀತಿಯಲ್ಲಿ ತನಿಖೆ ನಡೆಸಲಾಗುವುದು ಎಂದು ನಂಜಯ್ಯನಮಠ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande