
ಚಿತ್ರಕೂಟ, 14 ಜುಲೈ (ಹಿ.ಸ.):
ಆ್ಯಂಕರ್:
ಉತ್ತರ ಪ್ರದೇಶದ ಭಗವಾನ್ ಶ್ರೀರಾಮರ ತಪೋಭೂಮಿಯಾದ ಚಿತ್ರಕೂಟದಲ್ಲಿ ಪೌರಾಣಿಕ ದೇವಲ್ ಕುಟಿ ಪ್ರದೇಶದಲ್ಲಿ 'ತಪೋವನ ವೃಕ್ಷ ಮಂದಿರ' ಸ್ಥಾಪಿಸಲು ಸಂಕಲ್ಪ ಕೈಗೊಳ್ಳಲಾಗಿದೆ.
ಮಂದಾಕಿನಿ ನದಿಯ ತಟದಲ್ಲಿರುವ ದೇವಲ್ ಕುಟಿಯ ನಾಲ್ಕು ಬೀಘಾ ಜಾಗದಲ್ಲಿ ಔಷಧೀಯ ಹಾಗೂ ಹಣ್ಣಿನ ಮರಗಳನ್ನು ನೆಟ್ಟು ತಪೋವನ ವೃಕ್ಷ ಮಂದಿರವನ್ನು ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. ಕಳೆದ ಸುಮಾರು ಒಂದೂವರೆ ದಶಕದಿಂದ ಇಲ್ಲಿ ತಪಸ್ಸು ಮಾಡುತ್ತಿರುವ ಸ್ವಾಮಿ ಧರ್ಮಾನಂದ ಅವರು ಈ ಘೋಷಣೆ ಮಾಡಿದ್ದಾರೆ.
ತಪಸ್ವಿ ಬಾಬಾ ಎಂದೇ ಪ್ರಸಿದ್ಧರಾಗಿರುವ ಸ್ವಾಮಿ ಧರ್ಮಾನಂದ, ಈ ಪ್ರದೇಶದಲ್ಲಿ ಹಿಂದೆ ಇದ್ದ ತಪಸ್ವಿಗಳು ಬೆಳೆಸಿದ ವೃಕ್ಷ ಸಂಪತ್ತನ್ನು ಸಂರಕ್ಷಿಸಿ ವಿಸ್ತರಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಶ್ರಮದಾನದ ಮೂಲಕವೇ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ರಾಜ್ಯದ ವೃಕ್ಷಾರೋಪಣ ಮಹಾ ಅಭಿಯಾನ ಹಾಗೂ 'ಒಂದು ಮರ ತಾಯಿಯ ಹೆಸರಿನಲ್ಲಿ' ಯೋಜನೆಯಡಿ ಈ ಸಂಕಲ್ಪವನ್ನು ಸಾಕಾರಗೊಳಿಸುವ ಆಶಯ ವ್ಯಕ್ತಪಡಿಸಿರುವ ಅವರು, ತಪೋವನ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಾಂಕ್ರೀಟ್ ನಿರ್ಮಾಣಗಳಿಂದ ಪ್ರಕೃತಿ ಹಾಗೂ ಆಧ್ಯಾತ್ಮಿಕ ವಾತಾವರಣಕ್ಕೆ ಧಕ್ಕೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ವರ್ಷದ ಆಶ್ವಯುಜ ಮಾಸದಿಂದ ದೇವಲ್ ಕುಟಿಯಲ್ಲಿ ವಿಶೇಷ ತಪಸ್ಸು ಆರಂಭಿಸಿ, ಮುಂದಿನ ವರ್ಷ ಅದೇ ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಸ್ವಾಮಿ ಧರ್ಮಾನಂದ ತಿಳಿಸಿದ್ದಾರೆ. ತಪೋವನವನ್ನು ಆಮ್ಲಜನಕ ಉತ್ಪಾದಿಸುವ ನೈಸರ್ಗಿಕ ಕೇಂದ್ರವನ್ನಾಗಿ ರೂಪಿಸಿ, ಮಕ್ಕಳು ಇಲ್ಲಿ ಬಂದು ಯೋಗಾಭ್ಯಾಸ ಮಾಡುವ ವಾತಾವರಣ ನಿರ್ಮಿಸುವುದು ತಮ್ಮ ಉದ್ದೇಶ ಎಂದು ಹೇಳಿದ್ದಾರೆ.
ಜಲಋಷಿ ಹಾಗೂ ವೃಕ್ಷಮಿತ್ರ ಅಭಿಮನ್ಯು ಭಾಯಿ ಅವರು, ತಪೋವನ ಪುನರುಜ್ಜೀವನ ಅಭಿಯಾನಕ್ಕೆ ಸಂತರು ಹಾಗೂ ಸಮಾಜವನ್ನು ಜೋಡಿಸಲು ದೇವಲ್ ಕುಟಿ, ಸೂರ್ಯಕುಂಡ, ಕಾಲ್ಕಾ ದೇವಿ ಬೆಟ್ಟ, ಕಾಮದಗಿರಿ ಪ್ರದಕ್ಷಿಣೆ ಮಾರ್ಗ, ಲಕ್ಷ್ಮಣ ಬೆಟ್ಟ ಹಾಗೂ ಬ್ರಹ್ಮಕುಂಡಗಳಲ್ಲಿ ಶೀಘ್ರದಲ್ಲೇ ಜಾಗೃತಿ ಸಭೆಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ. ಸರ್ಕಾರ ಹಾಗೂ ಸಮಾಜ ನೆಡುವ ಪ್ರತಿಯೊಂದು ಸಸಿಯೂ ಬದುಕಿ ಬೆಳೆಯುವಂತೆ ಮಾಡಿ, ಚಿತ್ರಕೂಟದ ತಪೋವನ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವುದೇ ಈ ಅಭಿಯಾನದ ಉದ್ದೇಶವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.