



ಬಳ್ಳಾರಿ, 14 ಜುಲೈ (ಹಿ.ಸ.)
ಆ್ಯಂಕರ್ : ಹೆಚ್.ಐ.ವಿ. ಮತ್ತು ಏಡ್ಸ್ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್. ಝುಬೇರ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಹಳೆಯ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಮಿಷನ್ ಏಡ್ಸ್ ಸುರಕ್ಷಾ’ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏಡ್ಸ್ ರೋಗಕ್ಕೆ ಸಂಪೂರ್ಣ ಗುಣಮುಖ ಮಾಡುವ ಔಷಧ ಇನ್ನೂ ಲಭ್ಯವಿಲ್ಲದ ಕಾರಣ, ಮುನ್ನೆಚ್ಚರಿಕೆ ಮತ್ತು ಜಾಗೃತಿಯೇ ಇದಕ್ಕೆ ಅತ್ಯುತ್ತಮ ಪರಿಹಾರವಾಗಿದೆ.
ಲೈಂಗಿಕ ಕಾರ್ಯಕರ್ತೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಇಂತಹ ರೋಗಗಳ ಭೀತಿಯಿಂದ ಮತ್ತು ದುರ್ಬಲತೆಯಿಂದ ಹೊರಬರಲು ಸಾಧ್ಯ ಎಂದರು.
ಜಿಲ್ಲೆಯ ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಶಾ ಕಾರ್ಯಕರ್ತೆಯರ ಸೇವೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಅವರಿಗೆ ಸೂಕ್ತ ತರಬೇತಿ ನೀಡಿ, ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು ಸೂಚಿಸಿದರು.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಹೆಚ್.ಐ.ವಿ ಕುರಿತಾದ ಮುಜುಗರವನ್ನು ಹೋಗಲಾಡಿಸಲು ಪ್ರಬಂಧ ಸ್ಪರ್ಧೆ, ಜಾನಪದ ನೃತ್ಯ, ಬೀದಿ ನಾಟಕ ಹಾಗೂ ಫ್ಲಾಶ್ ಮಾಬ್ಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಹೆಚ್.ಐ.ವಿ ಏಡ್ಸ್ ನಿಯಂತ್ರಣ ಘಟಕದ ನಿಯಂತ್ರಣಾಧಿಕಾರಿ ಡಾ. ಇಂದ್ರಾಣಿ ವಿ. ಅವರು, ಜಿಲ್ಲೆಯ ಪ್ರಮುಖ ರಕ್ತನಿಧಿ ಕೇಂದ್ರಗಳಲ್ಲಿ 2019 ರಿಂದ 2026 ರವರೆಗಿನ ಅವಧಿಯಲ್ಲಿ ಸಂಗ್ರಹಿಸಲಾದ ರಕ್ತದ ಮಾದರಿಗಳ ತಪಾಸಣೆಯಿಂದ ಒಟ್ಟು 115 ಎಚ್ಐವಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಪತ್ತೆಯಾದ ಒಟ್ಟು 115 ಪ್ರಕರಣಗಳ ಪೈಕಿ 37 ಜನರನ್ನು ಹೆಚ್ಚಿನ ತಪಾಸಣೆ ಮತ್ತು ಕೌನ್ಸೆಲಿಂಗ್ಗಾಗಿ ಐಸಿಟಿಸಿ ಕೇಂದ್ರಗಳಿಗೆ ಶಿಫಾರಸ್ಸು ಮಾಡಲಾಗಿದೆ. ಬಾಕಿ ಉಳಿದಿರುವ 78 ಪ್ರಕರಣಗಳ ವ್ಯಕ್ತಿಗಳನ್ನು ಪತ್ತೆಹಚ್ಚಿ ಅವರಿಗೆ ಸೂಕ್ತ ವೈದ್ಯಕೀಯ ಮಾರ್ಗದರ್ಶನ ನೀಡುವುದು ಆರೋಗ್ಯ ಇಲಾಖೆಯ ಮುಂದಿರುವ ಮುಖ್ಯ ಗುರಿಯಾಗಿದೆ. ಇದಕ್ಕಾಗಿ ‘ಮೈಕ್ರೋ ಲೆವೆಲ್ ಪ್ಲಾನ್' ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಲಾರಿ ಚಾಲಕರಿಗಾಗಿ ‘ಅಮೃತ' ಪ್ರಾಜೆಕ್ಟ್ ಅಡಿಯಲ್ಲಿ ಐಸಿಟಿಸಿ ಕೇಂದ್ರಗಳೊಂದಿಗೆ ಟೈ-ಅಪ್ ಮಾಡಿಕೊಂಡು ನಿಯಮಿತ ಪರೀಕ್ಷೆ ನಡೆಸಲಾಗುತ್ತಿದೆ. ಉದ್ಯೋಗಕ್ಕಾಗಿ 5-6 ತಿಂಗಳು ಅಥವಾ ವರ್ಷಗಟ್ಟಲೆ ಕುಟುಂಬದಿಂದ ದೂರವಿರುವ ವಲಸೆ ಕಾರ್ಮಿಕರನ್ನು ಗುರುತಿಸಿ ವಿಶೇಷ ಜಾಗೃತಿ ಮೂಡಿಸಲಾಗುತ್ತಿದೆ. ಕ್ಯುರ್ ಆರ್ ಕೋಡ್ ಆಧಾರಿತ ‘ಮೊಬಿಲೈಸೇಶನ್ ಫಾರ್ ಎಚ್ಐವಿ ಸುರಕ್ಷತಾ ಅಭಿಯಾನ-2026’ ರ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್. ಬಸರೆಡ್ಡಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಡಿಎನ್ಒ ಗಿರೀಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಮ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ವಿವಿಧ ರಕ್ತ ಭಂಡಾರದ ಪ್ರತಿನಿಧಿಗಳು, ಜೆ.ಎಸ್.ಡಬ್ಲ್ಯೂ ಸಂಸ್ಥೆಯ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್