
ನವದೆಹಲಿ, 14 ಜುಲೈ (ಹಿ.ಸ.):
ಆ್ಯಂಕರ್:ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜುಲೈ 15ರಂದು ನವದೆಹಲಿಯ ಅಖಿಲ ಭಾರತೀಯ ಆಯುರ್ವೇದ ಸಂಸ್ಥೆ (ಎಐಐಎ)ಯಲ್ಲಿ ಆಯುಷ್ ಸಚಿವಾಲಯ ಆಯೋಜಿಸಿರುವ ಮೂರು ದಿನಗಳ ಅಂತಾರಾಷ್ಟ್ರೀಯ 'ಸೌಶ್ರುತಮ್ 2026' ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಜುಲೈ 15ರಿಂದ 17ರವರೆಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಜುಲೈ 14ರಂದು ಪೂರ್ವ ಕಾರ್ಯಾಗಾರ ಆಯೋಜಿಸಲಾಗಿದೆ.
ಶಸ್ತ್ರಚಿಕಿತ್ಸೆಯ ಪಿತಾಮಹರೆಂದು ಪರಿಗಣಿಸಲ್ಪಡುವ ಆಚಾರ್ಯ ಸುಶ್ರುತರ ಜಯಂತಿಯ ಅಂಗವಾಗಿ ಈ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಆಯುರ್ವೇದ ಮತ್ತು ಆಧುನಿಕ ಶಸ್ತ್ರಚಿಕಿತ್ಸಾ ವಿಜ್ಞಾನದ ಸಮನ್ವಯ ಕುರಿತು ದೇಶ-ವಿದೇಶಗಳ ತಜ್ಞರು ಚರ್ಚೆ ನಡೆಸಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಭಾರತೀಯ ವೈದ್ಯಕೀಯ ವ್ಯವಸ್ಥೆಗಳ ಆಯೋಗ (ಎನ್‌ಸಿಐಎಸ್‌ಎಂ) ಸಿದ್ಧಪಡಿಸಿರುವ ಆಯುರ್ವೇದ ಮಹಿಳಾ ಪದವೀಧರರ ವೃತ್ತಿಜೀವನದ ಮೌಲ್ಯಮಾಪನ ಕುರಿತ ರಾಷ್ಟ್ರೀಯ ಅಧ್ಯಯನ ವರದಿ ಬಿಡುಗಡೆ ಮಾಡಲಾಗುತ್ತದೆ. ಅಲ್ಲದೆ ₹14.5 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾದ ಅತ್ಯಾಧುನಿಕ 3-ಟೆಸ್ಲಾ ಹೈ-ಫೀಲ್ಡ್ ಎಂಆರ್‌ಐ ವ್ಯವಸ್ಥೆಯನ್ನೂ ಉದ್ಘಾಟಿಸಲಾಗುತ್ತದೆ.
ವಿಚಾರ ಸಂಕಿರಣದಲ್ಲಿ ಮುಖ್ಯ ಉಪನ್ಯಾಸಗಳು, ತಜ್ಞರ ಚರ್ಚೆಗಳು, ಕಾರ್ಯಾಗಾರಗಳು ಹಾಗೂ ವೈಜ್ಞಾನಿಕ ಸಂಶೋಧನಾ ಪ್ರಬಂಧಗಳ ಮಂಡನೆ ನಡೆಯಲಿದ್ದು, ಥೈಲ್ಯಾಂಡ್, ಇಸ್ರೇಲ್, ಆಸ್ಟ್ರಿಯಾ, ಯುನೈಟೆಡ್ ಕಿಂಗ್‌ಡಮ್, ಶ್ರೀಲಂಕಾ, ಇಂಡೋನೇಷ್ಯಾ, ನೇಪಾಳ, ಗ್ರೀಸ್ ಹಾಗೂ ಭಾರತದ ಖ್ಯಾತ ಶಸ್ತ್ರಚಿಕಿತ್ಸಕರು, ಶಿಕ್ಷಣತಜ್ಞರು ಮತ್ತು ಸಂಶೋಧಕರು ಭಾಗವಹಿಸಲಿದ್ದಾರೆ. ಕೇಂದ್ರ ಆಯುಷ್ ರಾಜ್ಯ ಸಚಿವ ಪ್ರತಾಪರಾವ್ ಜಾಧವ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ತರಣಜೀತ್ ಸಿಂಗ್ ಸಂಧು ಸೇರಿದಂತೆ ಹಲವು ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುವರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.