
ಗದಗ, 14 ಜುಲೈ (ಹಿ.ಸ.)
ಆ್ಯಂಕರ್:- ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಲಿರುವ 2026ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆಗಳು ಯಾವುದೇ ಅಡೆತಡೆ ಇಲ್ಲದೆ, ಪಾರದರ್ಶಕವಾಗಿ ಹಾಗೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ಗದಗ ನಗರದ ಸರ್ವೋದಯ ಕಾಲೋನಿ ಹಿಂಭಾಗದಲ್ಲಿರುವ ಸಿ.ಡಿ.ಓ ಜೈನ್ ಇಂಗ್ಲಿಷ್ ಮೀಡಿಯಂ ಶಾಲೆ ಪರೀಕ್ಷಾ ಕೇಂದ್ರದ ಸುತ್ತಲಿನ 300 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವಾಗಿ ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗವು ಜುಲೈ 17, 18 ಮತ್ತು 19 ರಂದು ಮೂರು ದಿನಗಳ ಕಾಲ ಇಲಾಖಾ ಪರೀಕ್ಷೆಗಳನ್ನು ನಡೆಸಲಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ಅಕ್ರಮ, ನಕಲು, ಪರೀಕ್ಷಾರ್ಥಿಗಳ ಬದಲಿಗೆ ಬೇರೆಯವರು ಪರೀಕ್ಷೆ ಬರೆಯುವಂತಹ ಪ್ರಕರಣಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆಯ ಸಂಬಂಧಿತ ಅಧಿಕಾರಗಳಡಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.
ಆದೇಶದ ಪ್ರಕಾರ, ಜುಲೈ 17ರಿಂದ ಜುಲೈ 19ರವರೆಗೆ ಪ್ರತಿದಿನ ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ಪರೀಕ್ಷಾ ಕೇಂದ್ರದ ಸುತ್ತಲಿನ 300 ಮೀಟರ್ ವ್ಯಾಪ್ತಿಯಲ್ಲಿ ಪರೀಕ್ಷಾರ್ಥಿಗಳು, ಪರೀಕ್ಷಾ ಕರ್ತವ್ಯದಲ್ಲಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಹೊರತುಪಡಿಸಿ ಇತರ ಯಾವುದೇ ವ್ಯಕ್ತಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದು, ಸಭೆ ನಡೆಸುವುದು ಅಥವಾ ಅನಗತ್ಯವಾಗಿ ಓಡಾಡುವುದನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪರೀಕ್ಷಾ ಕೇಂದ್ರದ ಸುತ್ತಮುತ್ತ ಕಾರ್ಯನಿರ್ವಹಿಸುತ್ತಿರುವ ಝೆರಾಕ್ಸ್ ಅಂಗಡಿಗಳು, ಬುಕ್ ಸ್ಟಾಲ್ಗಳು ಹಾಗೂ ಫೋಟೋಕಾಪಿ ಕೇಂದ್ರಗಳನ್ನು ಪರೀಕ್ಷೆಯ ಅವಧಿಯಲ್ಲಿ ಮುಚ್ಚುವಂತೆ ಜಿಲ್ಲಾಡಳಿತ ಆದೇಶಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆ, ನಕಲು ಹಾಗೂ ಇತರೆ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಇದಲ್ಲದೆ ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಹಾಗೂ ಇತರ ಯಾವುದೇ ಸಂಪರ್ಕ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪರೀಕ್ಷಾರ್ಥಿಗಳು ಹಾಗೂ ಕರ್ತವ್ಯದಲ್ಲಿರುವ ಸಿಬ್ಬಂದಿಯೂ ಸಹ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
ಮಾಧ್ಯಮ ಪ್ರತಿನಿಧಿಗಳಿಗೂ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಹಾಗೂ ಪರೀಕ್ಷೆ ಮುಗಿಸಿ ಹೊರಬರುವ ಸಮಯದಲ್ಲಿ ಮಾತ್ರ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ. ಆದರೆ ಪರೀಕ್ಷೆಯ ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ಪರೀಕ್ಷಾ ಕೊಠಡಿಗಳ ಒಳಗೆ ಪ್ರವೇಶಿಸುವುದು, ವಿಡಿಯೋ ಅಥವಾ ಛಾಯಾಚಿತ್ರ ನಿಷೇಧ ಮಾಡಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP