
ತುಮಕೂರು, 13 ಜುಲೈ (ಹಿ.ಸ.):
ಆ್ಯಂಕರ್:
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ತಿಪಟೂರು ರೈಲು ನಿಲ್ದಾಣದಲ್ಲಿ ಹೊಸ ಯಲಹಂಕ–ಅರಸೀಕೆರೆ ಮೆಮು ವಿಶೇಷ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಜುಲೈ 14ರಿಂದ ಪ್ರತಿದಿನ ಸಂಚರಿಸಲಿರುವ ರೈಲು ಸಂಖ್ಯೆ 66505 ಯಲಹಂಕದಿಂದ ಬೆಳಗ್ಗೆ 6.45ಕ್ಕೆ ಹೊರಟು 11 ಗಂಟೆಗೆ ಅರಸೀಕೆರೆ ತಲುಪಲಿದೆ. ಹಿಂದಿರುಗುವ 66506 ರೈಲು ಮಧ್ಯಾಹ್ನ 2.10ಕ್ಕೆ ಅರಸೀಕೆರೆಯಿಂದ ಹೊರಟು ಸಂಜೆ 7.15ಕ್ಕೆ ಯಲಹಂಕ ತಲುಪಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ವಿ. ಸೋಮಣ್ಣ, ಹೊಸ ಮೆಮು ರೈಲು ಸೇವೆಯಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ದೈನಂದಿನ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು. ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ತಿಪಟೂರು ರೈಲು ನಿಲ್ದಾಣವನ್ನು ₹23.37 ಕೋಟಿ ವೆಚ್ಚದಲ್ಲಿ ಆಧುನೀಕರಿಸಲಾಗುತ್ತಿದ್ದು, ನೂತನ ಸೌಲಭ್ಯಗಳು ನಿರ್ಮಾಣವಾಗುತ್ತಿವೆ ಎಂದು ತಿಳಿಸಿದರು.
ಇದೇ ವೇಳೆ ಶಾರದಾನಗರ ಮತ್ತು ಹೊನ್ನಾವಳ್ಳಿ ಸಮೀಪ ಕ್ರಮವಾಗಿ ₹89.32 ಕೋಟಿ ಹಾಗೂ ₹29.74 ಕೋಟಿ ವೆಚ್ಚದಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಸಂಚಾರ ಸುಗಮಗೊಳಿಸಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಕೆ. ಶಡಾಕ್ಷರಿ, ಮೈಸೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಮ್ಮಾಸ್ ಹಮೀದ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.