ಪೂರ್ವ ಪ್ರಾಥಮಿಕ ಶಿಕ್ಷಣ ಮಗುವಿನ ಭವಿಷ್ಯದ ಭದ್ರ ಬುನಾದಿ
ಪೂರ್ವ ಪ್ರಾಥಮಿಕ ಶಿಕ್ಷಣ ಮಗುವಿನ ಭವಿಷ್ಯದ ಭದ್ರ ಬುನಾದಿ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೀಚರ್ಸ್ ಟ್ರೈನಿಂಗ್  ಘಟಿಕೋತ್ಸವ ತರಬೇತಿ ಪಡೆದ ಶಿಕ್ಷಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.


ಕೋಲಾರ, ೧೩ ಜುಲೈ (ಹಿ.ಸ):

ಆ್ಯಂಕರ್ : ಪೂರ್ವ ಪ್ರಾಥಮಿಕ ಶಿಕ್ಷಣವು ಮಗುವಿನ ಭವಿಷ್ಯದ ಶೈಕ್ಷಣಿಕ ಮತ್ತು ವೈಯಕ್ತಿಕ ಯಶಸ್ಸಿಗೆ ಭದ್ರ ಬುನಾದಿಯಾಗಿದೆ ಎಂದು ಡಯಟ್ ಉಪನ್ಯಾಸಕರಾದ ಬಾಲಾಜಿ ಅಭಿಪ್ರಾಯಪಟ್ಟರು.

ನಗರದ ಎಂಬಿ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೀಚರ್ಸ್ ಟ್ರೈನಿಂಗ್ ಸಂಸ್ಥೆಯು ಆಯೋಜಿಸಿದ್ದ ಎನ್.ಟಿ.ಟಿ ಮತ್ತು ಪಿ.ಟಿ.ಟಿ ಶಿಕ್ಷಣಾರ್ಥಿಗಳ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣ ಎಂದರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದಲ್ಲ, ಅದು ಹೊರಗಿನ ಪ್ರಪಂಚದಲ್ಲಿ ಬದುಕನ್ನು ಕಟ್ಟಿಕೊಳ್ಳುವ ಕೌಶಲವಾಗಿದೆ. ಮೂರರಿಂದ ಐದು ವರ್ಷದೊಳಗಿನ ಮಕ್ಕಳಲ್ಲಿ ಸಾಮಾಜಿಕ, ಭಾವನಾತ್ಮಕ ಅರಿವು ಹಾಗೂ ದೈಹಿಕ ಆಟಗಳ ಮೂಲಕ ಕಲಿಕೆಯನ್ನು ಉತ್ತೇಜಿಸಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ್ ಮಾತನಾಡಿ, ಕಳೆದ ೧೫ ವರ್ಷಗಳಿಂದ ರಾಜ್ಯಾದ್ಯಂತ ತಮ್ಮ ಶಾಖೆಗಳನ್ನು ಹೊಂದಿರುವ ಸಂಸ್ಥೆಯು ಅನೇಕರಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಮಗುವಿನ ಮೊದಲ ಗುರು ತಾಯಿ ಮತ್ತು ಮೊದಲ ಪಾಠಶಾಲೆ ಮನೆಯಾಗಿದ್ದು, ಅಲ್ಲಿನ ಕಲಿಕೆಯನ್ನು ಶಾಲಾ ವಾತಾವರಣಕ್ಕೆ ಹೊಂದಿಕೆಯಾಗುವ0ತೆ ಮಾಡುವುದು ಶಿಕ್ಷಕರ ಜವಾಬ್ದಾರಿ. ಶಿಕ್ಷಣಾರ್ಥಿಗಳು ತಾವು ಕಾರ್ಯನಿರ್ವಹಿಸುವ ಸಂಸ್ಥೆಗಳಲ್ಲಿ ಮಕ್ಕಳೊಂದಿಗೆ ಬೆರೆತು ಉತ್ತಮ ಶಿಕ್ಷಕರಾಗಿ ರೂಪುಗೊಳ್ಳಬೇಕೆಂದು ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿ ತಿಮ್ಮಸಂದ್ರ ನಾಗರಾಜ್ ಮಾತನಾಡಿ, ಮಗುವಿನ ಮೊದಲ ಐದು ವರ್ಷಗಳ ಮಾನಸಿಕ ಬೆಳವಣಿಗೆ ಅತ್ಯಂತ ನಿರ್ಣಾಯಕವಾಗಿದೆ. ಈ ಅವಧಿಯಲ್ಲಿ ಮೆದುಳು ಅತ್ಯಂತ ವೇಗವಾಗಿ ಮತ್ತು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತದೆ. ನರ್ಸರಿ, ಪ್ರೀ-ಕೆಜಿ, ಎಲ್ಕೆಜಿ, ಯುಕೆಜಿ ಹಾಗೂ ಅಂಗನವಾಡಿಗಳಲ್ಲಿ ಮಗು ಅನ್ವೇಷಣೆಗೆ ಪೂರಕವಾದ ಸುರಕ್ಷಿತ ವಾತಾವರಣ ನಿರ್ಮಿಸುವುದು ಶಿಕ್ಷಕರ ಕರ್ತವ್ಯ ಎಂದರು.

ಮುಳಬಾಗಿಲಿನ ಚಾನ್ ಪಾಷಾ ಮಾತನಾಡಿ, ಆಟ, ಹಾಡು, ಕಥೆ, ಒಗಟುಗಳು ಮತ್ತು ಬಣ್ಣಗಳ ಮೂಲಕ ಕಲಿಸುವುದರಿಂದ ಮಗುವಿನ ಯೋಚನಾ ಶಕ್ತಿ ಹಾಗೂ ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದರು.

ಜಾಲಪ್ಪ ಶಿಕ್ಷಣ ಸಂಸ್ಥೆಯ ಬಬಿತಾ ಮಾತನಾಡಿ, ಪ್ರೀತಿ-ವಿಶ್ವಾಸದಿಂದ ತಪ್ಪುಗಳನ್ನು ತಿದ್ದುತ್ತಾ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತರಬೇತುದಾರರಾದ ಮೌನಿಕ, ಮೇಘನ, ಶಿಲ್ಪ ಸೇರಿದಂತೆ ಸುಮಾರು ೫೦ ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande