2028ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಎಸ್ ಡಿ ಪಿ ಐ ಸ್ಪರ್ಧೆ
ಗದಗ, 13 ಜುಲೈ (ಹಿ.ಸ.) ಆ್ಯಂಕರ್:- 2028ರ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಂಡಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಅ
ಫೋಟೋ


ಗದಗ, 13 ಜುಲೈ (ಹಿ.ಸ.)

ಆ್ಯಂಕರ್:- 2028ರ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಂಡಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ತಿಳಿಸಿದ್ದಾರೆ.

ಗದಗ ನಗರದಲ್ಲಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದಲೇ ಚುನಾವಣೆಗೆ ಸಂಬಂಧಿಸಿದ ಪೂರ್ವಸಿದ್ಧತೆಗಳನ್ನು ಆರಂಭಿಸಲಾಗಿದ್ದು, ರಾಜ್ಯಾದ್ಯಂತ ಪಕ್ಷದ ಸಂಘಟನೆಯನ್ನು ಬಲಪಡಿಸುವುದು, ಹೋರಾಟಗಳನ್ನು ತೀವ್ರಗೊಳಿಸುವುದು ಹಾಗೂ ಕಾರ್ಯಕರ್ತರ ಜಾಲವನ್ನು ವಿಸ್ತರಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.

ಗದಗ ಸೇರಿದಂತೆ ಕರ್ನಾಟಕದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಗುರಿಯೊಂದಿಗೆ ಪಕ್ಷ ಸಂಘಟನಾತ್ಮಕವಾಗಿ ಸಜ್ಜಾಗಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಲಿದೆ ಎಂದು ಅವರು ತಿಳಿಸಿದರು.

ಈ ವೇಳೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್.ಐ.ಆರ್.) ಕುರಿತು ಪ್ರತಿಕ್ರಿಯಿಸಿದ ಅಬ್ದುಲ್ ಮಜೀದ್ ಮೈಸೂರು, ಎಸ್.ಐ.ಆರ್. ಪ್ರಕ್ರಿಯೆ ಜನವಿರೋಧಿ ಹಾಗೂ ಸಂವಿಧಾನ ವಿರೋಧಿ ಎನ್ನುವುದು ಎಸ್ಡಿಪಿಐಯ ಸ್ಪಷ್ಟ ನಿಲುವಾಗಿದೆ ಎಂದು ಹೇಳಿದರು.

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡುವುದು ತಪ್ಪಲ್ಲ. ಆದರೆ, ಅದರ ಹೆಸರಿನಲ್ಲಿ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ತಳ್ಳಲಾಗುತ್ತಿದೆ. ಮತದಾರರ ಹಕ್ಕುಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಪ್ರಕ್ರಿಯೆ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಆರೋಪಿಸಿದರು.

ಪ್ರಸ್ತುತ ಅನುಸರಿಸಲಾಗುತ್ತಿರುವ ವ್ಯವಸ್ಥೆಯಲ್ಲಿ ಹಲವು ಅವೈಜ್ಞಾನಿಕ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. 2002ರ ದಾಖಲೆಗಳನ್ನೇ ಕಡ್ಡಾಯವಾಗಿ ಕೇಳುವ ಹಠ ಸರಿಯಲ್ಲ. ದಾಖಲೆಗಳಲ್ಲಿ ಅಕ್ಷರದೋಷ ಅಥವಾ ಹೆಸರಿನ ಸಣ್ಣಪುಟ್ಟ ವ್ಯತ್ಯಾಸಗಳನ್ನೇ ಆಧಾರವಾಗಿಟ್ಟುಕೊಂಡು ಮತದಾರರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.

ಬೂತ್ ಮಟ್ಟದ ಅಧಿಕಾರಿಗಳಾದ (ಬಿ.ಎಲ್.ಓ.) ಮೇಲೆ ಅನಗತ್ಯ ಒತ್ತಡ ಹೇರಿ ಕೆಲಸ ಮಾಡಿಸಲಾಗುತ್ತಿದೆ. ನೈಜ ಮತದಾರರ ಪರಿಶೀಲನೆಗಿಂತ ನಿಗದಿತ ಗುರಿ (ಟಾರ್ಗೆಟ್) ಪೂರ್ಣಗೊಳಿಸುವತ್ತ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದರಿಂದ ಸರಿಯಾದ ಮ್ಯಾಪಿಂಗ್ ಆಗುತ್ತಿಲ್ಲ. ಒಬ್ಬರ ಮಾಹಿತಿಯನ್ನು ಇನ್ನೊಬ್ಬರ ಹೆಸರಿಗೆ ಸೇರಿಸುವಂತಹ ಗೊಂದಲಗಳು ಉಂಟಾಗುತ್ತಿವೆ ಎಂದು ಆರೋಪಿಸಿದರು.

ಈ ಪರಿಸ್ಥಿತಿಯನ್ನು ವಿವರಿಸುವ ವೇಳೆ ಅವರು, ಇಮಾಮ್ ಸಾಬ್ಗೆ ಗೊಕ್ಲಾಸ್ ಸಾಬ್ ಎನ್ನುವ ಗಾದೆ ಮಾತಿನಂತಾಗಿದೆ ಎಂದು ವ್ಯಂಗ್ಯವಾಡಿದರು.

ಕರ್ನಾಟಕದಲ್ಲಿ ಸದ್ಯ ಯಾವುದೇ ಚುನಾವಣೆಗಳು ನಡೆಯುತ್ತಿಲ್ಲ. ಹೀಗಿರುವಾಗ ಇಷ್ಟೊಂದು ಆತುರದಲ್ಲಿ ಕೆಲಸ ನಡೆಸುವ ಅಗತ್ಯವೇ ಇಲ್ಲ. ಬಿ.ಎಲ್.ಓ.ಗಳು ತಮ್ಮ ನಿಯಮಿತ ಸರ್ಕಾರಿ ಕರ್ತವ್ಯ ಮುಗಿಸಿದ ಬಳಿಕ ಮನೆ-ಮನೆಗೆ ತೆರಳಿ ಸಮರ್ಪಕವಾಗಿ ಪರಿಶೀಲನೆ ನಡೆಸಲು ಅವಕಾಶ ನೀಡಬೇಕು. ಆದರೆ, ಈಗಿನ ಒತ್ತಡದಿಂದ ಅನೇಕ ಬಿ.ಎಲ್.ಓ.ಗಳು ಮಾನಸಿಕವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕವಾಗಿ, ವೈಜ್ಞಾನಿಕವಾಗಿ ಹಾಗೂ ಜನಸ್ನೇಹಿಯಾಗಿ ನಡೆಸಬೇಕು. ಮತದಾನದ ಹಕ್ಕಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ಸರ್ಕಾರ ಹಾಗೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್ ಡಿ ಪಿ ಐ ಪಕ್ಷದ ಜಿಲ್ಲಾ ಹಾಗೂ ಸ್ಥಳೀಯ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande