
ಬೆಂಗಳೂರು, 13 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯದಲ್ಲಿ ಡೀಪ್ ಟೆಕ್, ನವೋದ್ಯಮ ಹಾಗೂ ತಂತ್ರಜ್ಞಾನ ಆಧಾರಿತ ಪರಿಸರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗುತ್ತಿರುವ ಇನ್ನೋವರ್ಸ್ ಹಾಗೂ ಮ್ಯೂಸಿಯಂ ಆಫ್ ಇನೋವೇಶನ್, ಸ್ಟಾರ್ಟ್‌ಅಪ್ ಮತ್ತು ಟೆಕ್ನಾಲಜಿ ಯೋಜನೆಗಳ ಪ್ರಗತಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ಈ ಎರಡೂ ಮಹತ್ವಾಕಾಂಕ್ಷಿ ಯೋಜನೆಗಳು ಡೀಪ್ ಟೆಕ್ ಮತ್ತು ನವೋದ್ಯಮ ಸಂಸ್ಕೃತಿಗೆ ಉತ್ತೇಜನ ನೀಡುವ ಪರಸ್ಪರ ಪೂರಕ ಸಂಸ್ಥೆಗಳಾಗಿದ್ದು, ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ UnboxingBLR ಸಹಯೋಗದ ಸಾರ್ವಜನಿಕ–ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಅನುಷ್ಠಾನಗೊಳ್ಳುತ್ತಿವೆ ಎಂದು ತಿಳಿಸಿದರು.
ಮ್ಯೂಸಿಯಂ ಆಫ್ ಇನೋವೇಶನ್, ಸ್ಟಾರ್ಟ್‌ಅಪ್ ಮತ್ತು ಟೆಕ್ನಾಲಜಿ ದೇಶದ ನಾವೀನ್ಯತೆ, ತಂತ್ರಜ್ಞಾನ ಹಾಗೂ ಉದ್ಯಮಶೀಲತೆಯ ಪಯಣವನ್ನು ದಾಖಲಿಸುವ ಭಾರತದ ಮೊದಲ ವಸ್ತುಸಂಗ್ರಹಾಲಯವಾಗಲಿದೆ. ಭಾರತದ ತಾಂತ್ರಿಕ ಸಾಧನೆಗಳು, ನವೋದ್ಯಮಿಗಳು, ಸಂಶೋಧನೆ ಹಾಗೂ ಭವಿಷ್ಯದ ತಂತ್ರಜ್ಞಾನಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜೊತೆಗೆ, ಯುವಜನರಲ್ಲಿ ಕುತೂಹಲ ಮತ್ತು ಸೃಜನಶೀಲತೆಯನ್ನು ಬೆಳೆಸುವ ವೇದಿಕೆಯಾಗಲಿದೆ ಎಂದು ಅವರು ಹೇಳಿದರು.
ಬೈಯಪ್ಪನಹಳ್ಳಿಯ ಐತಿಹಾಸಿಕ ಎನ್‌ಜಿಇಎಫ್ ಆವರಣದಲ್ಲಿ ಕರ್ನಾಟಕ ಟೆಕ್ನಾಲಜಿ ಇನೋವೇಶನ್ ಮ್ಯೂಸಿಯಂ ಫೌಂಡೇಶನ್ ಈ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಿದೆ. 105 ಎಕರೆ ವಿಸ್ತೀರ್ಣದ ಆವರಣದಲ್ಲಿ 65 ಎಕರೆ ನಗರ ಅರಣ್ಯವಿದ್ದು, ಹಳೆಯ ಸ್ವಿಚ್‌ಗಿಯರ್ ಕಾರ್ಖಾನೆಯ ಶೆಡ್ ಅನ್ನು ಸಂರಕ್ಷಿಸಿ ಆಧುನಿಕ ವಸ್ತುಸಂಗ್ರಹಾಲಯವಾಗಿ ರೂಪಿಸಲಾಗುತ್ತಿದೆ.
ಪ್ರಸ್ತುತ 10,061 ಚದರ ಮೀಟರ್ ವಿಸ್ತೀರ್ಣದ ಕಟ್ಟಡವನ್ನು ಸುಮಾರು 24,000 ಚದರ ಮೀಟರ್‌ಗೆ ವಿಸ್ತರಿಸಲಾಗುತ್ತಿದ್ದು, ಅದರಲ್ಲಿ 12,325 ಚದರ ಮೀಟರ್ ಪ್ರದೇಶವನ್ನು ಸಂವಾದಾತ್ಮಕ ಪ್ರದರ್ಶನ ಗ್ಯಾಲರಿಗಳು ಹಾಗೂ ಸಾರ್ವಜನಿಕ ಅನುಭವ ಕೇಂದ್ರಗಳಿಗೆ ಮೀಸಲಿಡಲಾಗಿದೆ. ಈ ಯೋಜನೆಯು ಭಾರತದ ನಾವೀನ್ಯತೆಯ ಪಯಣವನ್ನು ಪರಿಚಯಿಸುವುದರ ಜೊತೆಗೆ ಕರ್ನಾಟಕದ ಕೈಗಾರಿಕಾ ಪರಂಪರೆಯನ್ನು ಸಂರಕ್ಷಿಸುವ ಹೆಗ್ಗುರುತಿನ ಸಂಸ್ಥೆಯಾಗಿ ರೂಪುಗೊಳ್ಳಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.