ಗದಗ-ಬೆಟಗೇರಿ ನಗರಸಭೆ ಮೇಲೆ ಲೋಕಾಯುಕ್ತ ದಾಳಿ
ಗದಗ, 13 ಜುಲೈ (ಹಿ.ಸ.) ಆ್ಯಂಕರ್:- ಗದಗ-ಬೆಟಗೇರಿ ನಗರಸಭೆಯಲ್ಲಿ ವಿವಿಧ ಕಾಮಗಾರಿಗಳು, ವಾಣಿಜ್ಯ ಕಟ್ಟಡಗಳ ಪರವಾನಿಗೆ, ನಗರಸಭೆ ಆಸ್ತಿಗಳ ಬಾಡಿಗೆ ಸಂಗ್ರಹ ಹಾಗೂ ಸಾರ್ವಜನಿಕ ಸೇವೆಗಳ ನಿರ್ವಹಣೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಸೋಮವಾರ ಲೋಕಾಯುಕ್ತ ಅಧಿಕ
ಫೋಟೋ


ಗದಗ, 13 ಜುಲೈ (ಹಿ.ಸ.)

ಆ್ಯಂಕರ್:- ಗದಗ-ಬೆಟಗೇರಿ ನಗರಸಭೆಯಲ್ಲಿ ವಿವಿಧ ಕಾಮಗಾರಿಗಳು, ವಾಣಿಜ್ಯ ಕಟ್ಟಡಗಳ ಪರವಾನಿಗೆ, ನಗರಸಭೆ ಆಸ್ತಿಗಳ ಬಾಡಿಗೆ ಸಂಗ್ರಹ ಹಾಗೂ ಸಾರ್ವಜನಿಕ ಸೇವೆಗಳ ನಿರ್ವಹಣೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಸೋಮವಾರ ಲೋಕಾಯುಕ್ತ ಅಧಿಕಾರಿಗಳು ನಗರಸಭೆ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿ ವ್ಯಾಪಕ ಶೋಧ ಕಾರ್ಯ ಕೈಗೊಂಡರು.

ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ನಗರಸಭೆ ಕಚೇರಿಗೆ ಆಗಮಿಸಿ ಕಚೇರಿಯ ವಿವಿಧ ವಿಭಾಗಗಳಲ್ಲಿನ ದಾಖಲೆಗಳನ್ನು ಪರಿಶೀಲಿಸಿದರು. ದಾಳಿಯ ಸುದ್ದಿ ತಿಳಿಯುತ್ತಿದ್ದಂತೆಯೇ ನಗರಸಭೆ ಕಚೇರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ತೀವ್ರ ಚರ್ಚೆ ಆರಂಭವಾಯಿತು.

ಗದಗ ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಆರು ಮಂದಿ ಸಿಪಿಐ ಹುದ್ದೆಯ ಅಧಿಕಾರಿಗಳು ಹಾಗೂ ಸುಮಾರು 15 ಸಿಬ್ಬಂದಿ ಪಾಲ್ಗೊಂಡಿದ್ದರು. ಗದಗ ಮತ್ತು ಧಾರವಾಡ ಲೋಕಾಯುಕ್ತ ಘಟಕದ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ವಿವಿಧ ವಿಭಾಗಗಳ ಕಡತಗಳು, ದಾಖಲೆಗಳು, ಅನುಮತಿ ಪತ್ರಗಳು ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿದರು.

ನಗರಸಭೆಯ ಕಂದಾಯ ವಿಭಾಗ, ಇಂಜಿನಿಯರಿಂಗ್ ವಿಭಾಗ ಸೇರಿದಂತೆ ಹಲವು ಪ್ರಮುಖ ವಿಭಾಗಗಳಲ್ಲಿ ಇಂಚಿಂಚು ಶೋಧ ನಡೆಸಿದ ಅಧಿಕಾರಿಗಳು, ವಾಣಿಜ್ಯ ಕಟ್ಟಡಗಳಿಗೆ ಪರವಾನಿಗೆ ನೀಡುವ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ನಡೆದಿದೆಯೇ ಎಂಬ ಬಗ್ಗೆ ಮಾಹಿತಿ ಕಲೆಹಾಕಿದರು. ಪರವಾನಿಗೆ ಮಂಜೂರಾತಿಯಲ್ಲಿ ಅಕ್ರಮ ಹಣ ವಸೂಲಿ ಹಾಗೂ ನಿಯಮಬಾಹಿರ ಅನುಮತಿ ನೀಡಿರುವ ಆರೋಪಗಳ ಕುರಿತ ದಾಖಲೆಗಳನ್ನು ಪರಿಶೀಲಿಸಲಾಯಿತು.

ಇದೇ ವೇಳೆ ನಗರಸಭೆ ಆಸ್ತಿಗಳ ಬಾಡಿಗೆ ಸಂಗ್ರಹದಲ್ಲಿ ಅಕ್ರಮ, ಬಾಡಿಗೆ ಮೊತ್ತದ ಲೆಕ್ಕಪತ್ರಗಳಲ್ಲಿ ವ್ಯತ್ಯಾಸ ಹಾಗೂ ಹಣಕಾಸು ದುರುಪಯೋಗ ನಡೆದಿರುವ ಕುರಿತು ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದರು. ನಗರಸಭೆಗೆ ಬರಬೇಕಾದ ಆದಾಯ ಸರಿಯಾಗಿ ದಾಖಲಾಗಿದೆಯೇ, ಬಾಡಿಗೆ ವಸೂಲಾತಿ ನಿಯಮಾನುಸಾರ ನಡೆದಿದೆಯೇ ಎಂಬ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರು.

ನಗರದಲ್ಲಿ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ, ಬೀದಿ ದೀಪಗಳ ನಿರ್ವಹಣೆ, ಸಾರ್ವಜನಿಕ ಕಾಮಗಾರಿಗಳ ಅನುಷ್ಠಾನ, ಗುತ್ತಿಗೆ ಕಾಮಗಾರಿಗಳ ಗುಣಮಟ್ಟ ಹಾಗೂ ವೆಚ್ಚದ ಬಗ್ಗೆ ಸಲ್ಲಿಕೆಯಾಗಿದ್ದ ದೂರುಗಳನ್ನೂ ತನಿಖೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ. ಸಾರ್ವಜನಿಕರಿಂದ ಬಂದಿರುವ ದೂರುಗಳ ಆಧಾರದ ಮೇಲೆ ಹಲವು ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ ಸಂಬಂಧಪಟ್ಟ ಸಿಬ್ಬಂದಿಯಿಂದ ಮಾಹಿತಿ ಪಡೆದರು.

ಶೋಧ ಕಾರ್ಯಾಚರಣೆಯ ವೇಳೆ ಹಲವು ದಾಖಲೆಗಳು, ಕಡತಗಳು ಹಾಗೂ ಕಂಪ್ಯೂಟರ್ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸಿದ್ದು, ಕೆಲ ಪ್ರಮುಖ ದಾಖಲೆಗಳ ಪ್ರತಿಗಳನ್ನು ತಮ್ಮ ವಶಕ್ಕೆ ಪಡೆದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಲೋಕಾಯುಕ್ತ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಕೆಲ ಅಧಿಕಾರಿಗಳು ದಾಖಲೆಗಳನ್ನು ತೋರಿಸಿ ಮಾಹಿತಿ ನೀಡಿದರೆ, ಇನ್ನೂ ಕೆಲವರನ್ನು ಹೆಚ್ಚಿನ ವಿವರಕ್ಕಾಗಿ ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ.

ನಗರಸಭೆಯ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಲಾಗಿದೆಯೇ ಹಾಗೂ ಸಾರ್ವಜನಿಕ ಹಣದ ಬಳಕೆ ನಿಯಮಾನುಸಾರವಾಗಿದೆಯೇ ಎಂಬುದನ್ನು ಪರಿಶೀಲಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಶೋಧದ ವೇಳೆ ಲಭ್ಯವಾಗುವ ದಾಖಲೆಗಳು ಹಾಗೂ ಮಾಹಿತಿ ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಲೋಕಾಯುಕ್ತ ಅಧಿಕಾರಿಗಳ ದಾಳಿಯಿಂದ ಗದಗ-ಬೆಟಗೇರಿ ನಗರಸಭೆಯಲ್ಲಿ ದಿನವಿಡೀ ಚಟುವಟಿಕೆಗಳು ಬಿರುಸುಗೊಂಡಿದ್ದು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಪ್ರಕರಣದ ಬೆಳವಣಿಗೆಗಳತ್ತ ಗಮನ ಹರಿಸಿವೆ. ತನಿಖೆ ಪೂರ್ಣಗೊಂಡ ನಂತರವೇ ಆರೋಪಗಳ ಸತ್ಯಾಸತ್ಯತೆ ಹಾಗೂ ಮುಂದಿನ ಕ್ರಮಗಳ ಕುರಿತು ಸ್ಪಷ್ಟ ಚಿತ್ರಣ ದೊರೆಯುವ ನಿರೀಕ್ಷೆಯಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande